Skip to main content

Police Roundup

ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನ ಅಜಾಗರೂಕತೆಗೆ ಯುವತಿ ಗಂಭೀರ ಗಾಯ: ನ್ಯಾಯಕ್ಕಾಗಿ ಸಂತ್ರಸ್ತೆಯ ಕಣ್ಣೀರು!

Share News

ಬೆಂಗಳೂರು: ದೈನಂದಿನ ಪ್ರಯಾಣಕ್ಕಾಗಿ ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಯನ್ನು ನೆಚ್ಚಿಕೊಂಡಿದ್ದ ಯುವತಿಯೊಬ್ಬಳು, ಚಾಲಕನ ನಿರ್ಲಕ್ಷ್ಯ ಮತ್ತು ಅತಿಯಾದ ವೇಗದಿಂದಾಗಿ ಭೀಕರ ಅಪಘಾತಕ್ಕೆ ಈಡಾಗಿ ತೀವ್ರವಾಗಿ ಗಾಯಗೊಂಡಿರುವ ದೂಲರ್ಭಾಗ್ಯಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು, ದೊಮ್ಮಲೂರಿನಲ್ಲಿ ಉದ್ಯೋಗದಲ್ಲಿದ್ದ ಸಾನಿಕೃಷ್ಣ ಎಂಬ ಯುವತಿಯೇ ಈ ದುರಂತಕ್ಕೆ ತುತ್ತಾದವರಾಗಿದ್ದಾರೆ.

2026ರ ಜೂನ್ 17ರಂದು ಸಾನಿಕೃಷ್ಣ ಅವರು ಬೈರಸಂದ್ರದಿಂದ ದೊಮ್ಮಲೂರಿಗೆ ತೆರಳಲು ರ‍್ಯಾಪಿಡೋ (Rapido) ಬೈಕ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಚಾಲಕ ಅತಿವೇಗವಾಗಿ ಬೈಕ್ ಚಲಾಯಿಸುತ್ತಿದ್ದುದನ್ನು ಗಮನಿಸಿದ ಯುವತಿ, “ಸಾಕಷ್ಟು ಸಮಯವಿದೆ, ದಯವಿಟ್ಟು ನಿಧಾನವಾಗಿ ಚಲಾಯಿಸಿ” ಎಂದು ಮನವಿ ಮಾಡಿದರೂ ಚಾಲಕ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾನೆ.

ಬಾಗ್‌ಮನೆ ಟೆಕ್ ಪಾರ್ಕ್ ಬಳಿ ತಲುಪಿದಾಗ, ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಒಂದನ್ನು ವೇಗವಾಗಿ ಓವರ್‌ಟೇಕ್ ಮಾಡಲು ಯತ್ನಿಸಿದ ಚಾಲಕ, ಬೈಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದಾನೆ. ಪರಿಣಾಮವಾಗಿ, ರಸ್ತೆಗೆ ಬಿದ್ದ ಸಾನಿಕೃಷ್ಣ ಟ್ರ್ಯಾಕ್ಟರ್ ಚಕ್ರದಡಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ.

 

ಈ ಅಪಘಾತದಲ್ಲಿ ಯುವತಿಯ 9 ಪಕ್ಕೆಲುಬುಗಳು ಮುರಿದಿದ್ದು, ಮುಖದ ಭಾಗ ಛಿದ್ರಗೊಂಡಿದೆ. ಆಂತರಿಕ ರಕ್ತಸ್ರಾವದಿಂದಾಗಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಗುಲ್ಮವನ್ನು (Spleen) ತೆರವುಗೊಳಿಸಲಾಗಿದೆ ಹಾಗೂ ಮುಖದ ವಿರೂಪತೆಯನ್ನು ಸರಿಪಡಿಸಲು ಸುದೀರ್ಘ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಲಾಗಿದೆ. ಬೆಂಗಳೂರಿನ ಪ್ರಥಮ ಚಿಕಿತ್ಸೆಯ ನಂತರ ಕೇರಳದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ವೆಚ್ಚ 20 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ.

 

​ಘಟನೆಯ ಕುರಿತು ರ‍್ಯಾಪಿಡೋ ಸಂಸ್ಥೆಗೆ ಕಾನೂನು ನೋಟಿಸ್ ರವಾನಿಸಿದ್ದರೂ ಕಂಪನಿಯು ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಸಂತ್ರಸ್ತೆ ಸಾನಿಕೃಷ್ಣ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

 

​ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಿ, ಕೇವಲ ಲಾಭದ ಉದ್ದೇಶದಿಂದ ಕಾರ್ಯಾಚರಿಸುವ ಇಂತಹ ಬೈಕ್ ಟ್ಯಾಕ್ಸಿ ಆ್ಯಪ್‌ಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಂತ್ರಸ್ತೆಗೆ ತಕ್ಷಣ ಸೂಕ್ತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಹಾಗೂ ಹಕ್ಕುಗಳ ಹೋರಾಟಗಾರರು ಆಗ್ರಹಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin