ಹೊಸಕೋಟೆ: ಕೆಲಸ ನೀಡಿ ಆಸರೆ ಕೊಟ್ಟ ಮನೆಗೇ ಕನ್ನ ಹಾಕಿ, ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದ ಖಾಸಗಿ ವಿಲ್ಲಾದಲ್ಲಿ ನಡೆದಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ನೇಪಾಳ ಮೂಲದ ವ್ಯಕ್ತಿಯೊಬ್ಬ ಈ ಖಾಸಗಿ ವಿಲ್ಲಾಗೆ ಭದ್ರತಾ ಸಿಬ್ಬಂದಿಯಾಗಿ (ಸೆಕ್ಯೂರಿಟಿ ಗಾರ್ಡ್) ಕೆಲಸಕ್ಕೆ ಸೇರಿಕೊಂಡಿದ್ದ. ತರುವಾಯ, ತನ್ನ ಪತ್ನಿಗೂ ಕೆಲಸ ಕೊಡಿಸುವಂತೆ ಮನೆ ಮಾಲೀಕರಲ್ಲಿ ವಿನಂತಿಸಿಕೊಂಡಿದ್ದ. ದಂಪತಿಯ ಬಡತನ ಕಂಡು ಕರುಣೆ ತೋರಿದ ಮಾಲೀಕರು ಆತನ ಪತ್ನಿಗೂ ವಿಲ್ಲಾದಲ್ಲೇ ಕೆಲಸ ನೀಡಿದ್ದರು.
ಸಮಯ ಸಾಧಿಸಿ ಕಳ್ಳತನ:
ಆಗಸ್ಟ್ 5ರಂದು ಮನೆ ಮಾಲೀಕರು ಕಾರ್ಯನಿಮಿತ್ತ ಊರಿಗೆ ತೆರಳುವ ಸಂದರ್ಭದಲ್ಲಿ, ಮನೆಯ ಕಡೆ ನಿಗಾವಹಿಸುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ, ಮಾಲೀಕರ ಗೈರುಹಾಜರಿಯನ್ನೇ ಬಂಡವಾಳ ಮಾಡಿಕೊಂಡ ಆರೋಪಿ ದಂಪತಿ ಹಾಗೂ ಅವರ ಸಹಚರರು, ಮಧ್ಯರಾತ್ರಿ ಮನೆಯೊಳಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ್ದಾರೆ.
ಸಿಸಿಟಿವಿಯಲ್ಲಿ ಕೃತ್ಯ ಸೆರೆ – ಆರೋಪಿಗಳ ಪತ್ತೆಗೆ ಜಾಲ:
ಕಳ್ಳತನದ ಸಂಪೂರ್ಣ ದೃಶ್ಯಗಳು ವಿಲ್ಲಾದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೃತ್ಯ ಎಸಗಿದ ತಕ್ಷಣವೇ ಸೆಕ್ಯೂರಿಟಿ ಗಾರ್ಡ್, ಆತನ ಪತ್ನಿ ಸೇರಿದಂತೆ ಇಡೀ ಗ್ಯಾಂಗ್ ಕೆಲಸ ತೊರೆದು ತಲೆಮರೆಸಿಕೊಂಡಿದೆ. ಮನೆ ಮಾಲೀಕರು ಊರಿನಿಂದ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪರಾರಿಯಾಗಿರುವ ನೇಪಾಳಿ ದಂಪತಿ ಹಾಗೂ ಅವರ ಸಹಚರರ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.