ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಅತ್ಯಂತ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕರು ಸೇರಿದಂತೆ ಒಟ್ಟು ಎಂಟು ಜನ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜೈಲಾಧಿಕಾರಿಗಳ ಗಂಭೀರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದ ಕುರಿತು ‘ಪೊಲೀಸ್ ರೌಂಡಪ್’ ಸಾಕ್ಷಿ ಸಮೇತ ನಿರಂತರವಾಗಿ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು. ಈ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು, ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವಿರುದ್ಧ ಇಂದು ಕಡಕ್ ಅಮಾನತು ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾರು?
ಜೈಲಿನ ಭದ್ರತೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕೆಳಗಿನ ಎಂಟು ಜನರನ್ನು ಅಮಾನತುಗೊಳಿಸಲಾಗಿದೆ:
ರಾಕೇಶ್ ಕಾಂಬ್ಳೇ – ಜೈಲು ಅಧೀಕ್ಷಕರು
ಬಿ. ಸುರೇಶ್ – ಸಹಾಯಕ ಅಧೀಕ್ಷಕರು
ಶ್ರೀಮಂತಗೌಡ ಪಾಟೀಲ್ – ಜೈಲರ್
ನಿಂಗಣ್ಣ – ರಾತ್ರಿ ಪಾಳೆಯದ ವಾರ್ಡರ್
ಯಮನಪ್ಪ ಕರುಬರ – ರಾತ್ರಿ ಪಾಳೆಯದ ವಾರ್ಡರ್
ಬಸವರಾಜ್ ಮೇತ್ರಿ – ರಾತ್ರಿ ಪಾಳೆಯದ ವಾರ್ಡರ್
ಸಾವಿತ್ರಿ ತಳಕೇರಿ – ರಾತ್ರಿ ಪಾಳೆಯದ ವಾರ್ಡರ್
ಅಜೀಮ್ – ರಾತ್ರಿ ಪಾಳೆಯದ ವಾರ್ಡರ್
ಅತ್ಯಂತ ಸುರಕ್ಷಿತ ವಲಯ ಎಂದು ಪರಿಗಣಿಸಲಾಗುವ ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳು ಅತ್ಯಂತ ಚಾಣಾಕ್ಷತನದಿಂದ ಜೈಲಾಧಿಕಾರಿಗಳ ಕಣ್ಣು ತಪ್ಪಿಸಿ ಪರಾರಿಯಾಗಿದ್ದರು. ಈ ಘಟನೆ ಜೈಲಿನ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿತ್ತು. ಈ ಬಗ್ಗೆ ‘ಪೊಲೀಸ್ ರೌಂಡಪ್’ ನಿರಂತರವಾಗಿ ಜೈಲು ಆಡಳಿತದ ಬೇಜವಾಬ್ದಾರಿತನವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು.
ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದು, ಪರಾರಿಯಾಗಿರುವ ಕೈದಿಗಳ ಪತ್ತೆಗಾಗಿ ಜಾಲ ಬೀಸಿದೆ.
ವರದಿ: ಗುಂಡು ಕುಲಕರ್ಣಿ, ವಿಜಯಪುರ