Skip to main content

Police Roundup

ಸತ್ತು ಬಿದ್ದಿದ್ದ ತಾಯಿಯ ಎದೆ ಮೇಲೆ ಮಲಗಿದ್ದ 2 ವರ್ಷದ ಕಂದಮ್ಮ: ಸಿಂಧನೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ!

Share News

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಹೆಚ್. ಕ್ಯಾಂಪ್-5ರ ಹೊರವಲಯದ ಜಮೀನಿನಲ್ಲಿ ಮಹಿಳೆಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

 

​ಆರ್.ಹೆಚ್. ಕ್ಯಾಂಪ್-4ರ ನಿವಾಸಿ ಸ್ನೇಹಾ (25) ಕೊಲೆಯಾದ ದುರಂತ ನಾರಿ. ಮಾರಣಾಂತಿಕ ಹಲ್ಲೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯ ಪಕ್ಕದಲ್ಲೇ ಆಕೆಯ 2 ವರ್ಷದ ಮಗುವನ್ನು ಬಿಟ್ಟು ಆರೋಪಿಗಳು ಕಾಲ್ಕಿತ್ತಿದ್ದರು.

 

​ತಾಯಿಯ ಎದೆ ಮೇಲೆ ಮಲಗಿದ್ದ ಕಂದ:

ತಾಯಿಯ ಸಾವು ಅರಿಯದ ಪುಟ್ಟ ಮಗು ಕೆಲಕಾಲ ಆಕೆಯ ಎದೆ ಮೇಲೆಯೇ ಮಲಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸ್ನೇಹಾಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಆಕೆ ಕೊನೆಯುಸಿರೆಳೆದಿದ್ದಾಳೆ. ಅದೃಷ್ಟವಶಾತ್, ಸಣ್ಣಪುಟ್ಟ ಗಾಯಗಳಾಗಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದೆ.

 

​ಗಂಡ ಹಾಗೂ ಪ್ರಿಯಕರ ವಶಕ್ಕೆ:

ಕುಟುಂಬ ಕಲಹದ ಹಿನ್ನೆಲೆಯಲ್ಲಿ ಪತಿಯೊಂದಿಗೆ ಜಗಳವಾಡಿಕೊಂಡಿದ್ದ ಸ್ನೇಹಾ, ಕಳೆದ 15 ದಿನಗಳ ಹಿಂದಷ್ಟೇ ತವರು ಮನೆಗೆ ಬಂದಿದ್ದಳು. ಸೆಪ್ಟೆಂಬರ್ 19ರ ಬೆಳಗಿನ ಜಾವ ಸುಮಾರು 4 ಗಂಟೆಗೆ ಅಣ್ಣನ ಮನೆಯಿಂದ ಹೊರಬಂದಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

 

​ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪತಿ ಅಮಿತ್ ಹಾಗೂ ಪ್ರಿಯಕರ ಎನ್ನಲಾದ ಶುಭಂ ಎಂಬಾತನನ್ನು ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

 

​ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ನಿಖರ ಕಾರಣ ಏನೆಂಬುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin