ಸಿದ್ಧಾಪುರ: ಮಾದಕ ವಸ್ತುಗಳ ಬಳಕೆ, ಅಪ್ರಾಪ್ತ ವಯಸ್ಸಿನ ವಾಹನ ಚಾಲನೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಿದ್ಧಾಪುರ ಪೊಲೀಸ್ ಠಾಣೆಯ ವತಿಯಿಂದ ಮಾಲ್ದಾರೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಗೆ ಭೇಟಿ ನೀಡಿದ ಸಿದ್ಧಾಪುರ ಠಾಣೆಯ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹಾದಿ ತಪ್ಪದಂತೆ ಕಾನೂನಿನ ಚೌಕಟ್ಟನ್ನು ಅರಿಯುವುದು ಅತ್ಯಗತ್ಯ ಎಂದರು. ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಭೀಕರ ದುಷ್ಪರಿಣಾಮಗಳು ಹಾಗೂ ವ್ಯಸನ ಮುಕ್ತ ಸಮಾಜದ ಮಹತ್ವದ ಬಗ್ಗೆ ಸುದೀರ್ಘವಾಗಿ ವಿವರಿಸಿದರು.
ಮಕ್ಕಳ ರಕ್ಷಣೆಗಾಗಿ ಇರುವ ಪೋಕ್ಸೋ (POSCO) ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸರಳವಾಗಿ ಮನವರಿಕೆ ಮಾಡಿಕೊಟ್ಟ ಅಧಿಕಾರಿಗಳು, ಯಾವುದೇ ರೀತಿಯ ಕಿರುಕುಳ ಅಥವಾ ಅನ್ಯಾಯ ನಡೆದರೆ ಧೈರ್ಯವಾಗಿ ಧ್ವನಿ ಎತ್ತುವಂತೆ ಪ್ರೇರೇಪಿಸಿದರು. ಜೊತೆಗೆ ಬಾಲಕಾರ್ಮಿಕ ಕಾಯ್ದೆಯ ನಿಯಮಗಳು ಹಾಗೂ ಬಾಲ್ಯಾವಸ್ಥೆಯಲ್ಲೇ ಶಿಕ್ಷಣ ಪಡೆಯುವ ಹಕ್ಕಿನ ಕುರಿತು ಜಾಗೃತಿ ಮೂಡಿಸಿದರು.
ಇದೇ ವೇಳೆ, ಚಾಲನಾ ಪರವಾನಗಿ (Driving License) ಇಲ್ಲದೆ ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವುದರಿಂದ ಆಗುವ ಕಾನೂನು ಸಂಕಷ್ಟಗಳು ಹಾಗೂ ರಸ್ತೆ ಅಪಘಾತಗಳ ಭೀಕರತೆಯ ಬಗ್ಗೆ ಎಚ್ಚರಿಕೆ ನೀಡಿದರು. ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಲ್ದಾರೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ಈ ಜನಪರ ಜಾಗೃತಿ ಮೂಡಿಸುವ ಕಾರ್ಯಕ್ಕೆ ಶಾಲಾ ಮಂಡಳಿ ಧನ್ಯವಾದ ಸಮರ್ಪಿಸಿದೆ.
