ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಬಂದ ಸ್ವಂತ ತಮ್ಮನನ್ನೇ ಅತ್ಯಂತ ಬ್ರೂಟಲ್ ಆಗಿ ಕೊಲೆ ಮಾಡಿ, ನಿರ್ಮಾಣ ಹಂತದ ಮನೆಯ ಪಾಯದಲ್ಲಿ ಶವ ಹೂತಿಟ್ಟಿದ್ದ ಪಾಪಿ ಅಣ್ಣನಿಗೆ ತುಮಕೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿ ರಾಜಾನಾಯ್ಕ್ (೪೫) ಶಿಕ್ಷೆಗೆ ಗುರಿಯಾದ ವ್ಯಕ್ತಿ. ದೃಶ್ಯ ಸಿನಿಮಾ ಮಾದರಿಯಲ್ಲಿ ನಡೆದಿದ್ದ ಈ ಭೀಕರ ಕೊಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಶಿರಾ ತಾಲೂಕಿನಲ್ಲಿ ೨೦೨೨ರ ಏಪ್ರಿಲ್ ೨ರ ಯುಗಾದಿ ಹಬ್ಬದ ರಾತ್ರಿ ಈ ಕೃತ್ಯ ನಡೆದಿತ್ತು. ಆರೋಪಿ ರಾಜಾನಾಯ್ಕ್ ತನ್ನ ತಮ್ಮ ರವಿಚಂದ್ರನಾಯಕ್‌ನ ಹೆಂಡತಿ ಸಾವಿತ್ರಿ ಬಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ರವಿಚಂದ್ರನಾಯಕ್‌ನಿಗೆ ತಿಳಿದು ಗಲಾಟೆಯಾಗಿತ್ತು. ಯುಗಾದಿ ಹಬ್ಬದ ರಾತ್ರಿ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದಾಗ, ರಾಜಾನಾಯ್ಕ್ ತಮ್ಮನ ಕೆನ್ನೆಗೆ ಹೊಡೆದಿದ್ದಾನೆ. ಆತ ಕೆಳಗೆ ಕುಸಿದು ಬಿದ್ದಾಗ, ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಬಳಿಕ ರಾಜಾನಾಯ್ಕ್ ಹಾಗೂ ಸಾವಿತ್ರಿ ಬಾಯಿ ಇಬ್ಬರೂ ಸೇರಿ ರವಿಚಂದ್ರನಾಯಕ್‌ನ ಮೃತದೇಹವನ್ನು ತಮ್ಮ ನಿರ್ಮಾಣ ಹಂತದ ಹೊಸ ಮನೆಯ ಪಾಯದೊಳಗೆ ಹೂತುಹಾಕಿ ಏನೂ ತಿಳಿಯದವರಂತೆ ನಾಟಕವಾಡಿದ್ದರು.
ಕೊಲೆಯಾದ ನಂತರ ರವಿಚಂದ್ರನಾಯಕ್ ನಾಪತ್ತೆಯಾಗಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಜಮೀನು ಪತ್ರಕ್ಕೆ ಸಹಿ ಹಾಕುವ ವಿಚಾರ ಬಂದಾಗ ರವಿಚಂದ್ರನಾಯಕ್ ಪತ್ತೆಯಾಗದಿದ್ದಾಗ ಹುಡುಕಾಟ ತೀವ್ರಗೊಂಡಿತ್ತು. ಕೊಲೆಯಾದ ಒಂದುವರೆ ತಿಂಗಳ ಬಳಿಕ ಪತ್ನಿ ಸಾವಿತ್ರಿ ಬಾಯಿಯ ನಡವಳಿಕೆಯಿಂದ ಕೊಲೆಯ ರಹಸ್ಯ ಬಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಶಿರಾ ಠಾಣೆ ಪೊಲೀಸರು ಆರೋಪಿಗಳಾದ ರಾಜಾನಾಯ್ಕ್ ಹಾಗೂ ಸಾವಿತ್ರಿ ಬಾಯಿಯನ್ನು ಬಂಧಿಸಿದ್ದರು.
ಆರೋಪಿ ರಾಜಾನಾಯ್ಕ್ ಈ ಹಿಂದೆ ತನ್ನ ಹೆಂಡತಿಯನ್ನೂ ಕೊಲೆ ಮಾಡಿ ಜೈಲುವಾಸ ಅನುಭವಿಸಿ ಹೊರಬಂದಿದ್ದ. ಜೈಲಿನಿಂದ ಬಂದ ನಂತರ ನಾದಿನಿ ಸಾವಿತ್ರಿ ಬಾಯಿ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದ. ಶಿರಾ ಪೊಲೀಸರು ಪ್ರಕರಣದ ಸುದೀರ್ಘ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಎರಡನೇ ಆರೋಪಿ ಸಾವಿತ್ರಿ ಬಾಯಿ ಮೃತಪಟ್ಟಿದ್ದಳು. ಇದೀಗ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ತುಮಕೂರಿನ ೨ನೇ ಹೆಚ್ಚುವರಿ ಮತ್ತು ಸೆಷನ್ ನ್ಯಾಯಾಲಯವು ಆರೋಪಿ ರಾಜಾನಾಯ್ಕ್ ಮೇಲಿನ ಅಪರಾಧ ಸಾಬೀತಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.