ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೇ ಮಿತಿಮೀರುತ್ತಿರುವ ವಿಐಪಿ ಸಂಸ್ಕೃತಿ ಹಾಗೂ ಸಂಚಾರ ನಿಯಮಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಪಾಲರ (ಗವರ್ನರ್) ಸಂಚಾರಕ್ಕಾಗಿ ಪೊಲೀಸರು ರಸ್ತೆ ಬಂದ್ ಮಾಡಿದ ಪರಿಣಾಮ, ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೆ ಅಸಹಾಯಕರಾದ ಸಾರ್ವಜನಿಕರೊಬ್ಬರು ರಸ್ತೆಯಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಪ್ರಮುಖ ರಸ್ತೆಯೊಂದರಲ್ಲಿ ರಾಜ್ಯಪಾಲರ ಆಗಮನಕ್ಕಾಗಿ ಪೊಲೀಸರು ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ತಡೆ ಹಿಡಿದಿದ್ದರು. ಆದರೆ, ರಾಜ್ಯಪಾಲರ ಕಾನ್ವಾಯ್ ಬರಲು ಇನ್ನು ಸಾಕಷ್ಟು ಸಮಯ ಇರುವಾಗಲೇ ಮುಂಜಾಗ್ರತಾ ಕ್ರಮವಾಗಿ ರಸ್ತೆ ಬಂದ್ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಯಿತು.
ಇದೇ ಸಂದರ್ಭದಲ್ಲಿ ತನ್ನ ಗರ್ಭಿಣಿ ಪತ್ನಿಯನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಬಂದಿದ್ದ ಸಾರ್ವಜನಿಕರೊಬ್ಬರು, ದಾರಿ ಸಿಗದೆ ಕಂಗಾಲಾಗಿದ್ದಾರೆ. ಪೊಲೀಸರ ಈ ಧೋರಣೆಯಿಂದ ಬೇಸತ್ತ ಅವರು ರಸ್ತೆಯ ಮೇಲೆಯೇ ಕುಳಿತು ತಮಗಾದ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆಯಲ್ಲಿ ಕುಳಿತು ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತ ವ್ಯಕ್ತಿ, ಕ್ಯಾಮೆರಾ ಮುಂದೆ ಕಣ್ಣೀರು ಮತ್ತು ಆಕ್ರೋಶ ಮಿಶ್ರಿತ ಧ್ವನಿಯಲ್ಲಿ ಮಾತನಾಡಿದ್ದಾರೆ:
”ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ, ಆಕೆಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು. ಆದರೆ ಇಲ್ಲಿ ದಾರಿಯೇ ಇಲ್ಲದಂತೆ ರಸ್ತೆ ಬಂದ್ ಮಾಡಲಾಗಿದೆ. ಗವರ್ನರ್ ಬರೋದಿಕ್ಕೆ ಇನ್ನೂ ಸಾಕಷ್ಟು ಸಮಯ ಇದೆ, ಈಗಲೇ ಯಾಕೆ ರಸ್ತೆ ಬಂದ್ ಮಾಡಿದ್ದೀರಿ? ನಾನು ದೇಶಕ್ಕೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಒಬ್ಬ ಸಾಮಾನ್ಯ ಮತದಾರ ಅಷ್ಟೇ! ನಾನೇನು ದೊಡ್ಡ ವಿಐಪಿ ಅಲ್ಲ. ನಮ್ಮಂತಹ ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲವೇ?” ಎಂದು ಆಡಳಿತ ವ್ಯವಸ್ಥೆಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಹಾಗೂ ಸಾಮಾನ್ಯ ಜನರಿಗೆ ತೊಂದರೆ ಕೊಡುವ ಈ ‘ವಿಐಪಿ ಸಂಸ್ಕೃತಿ’ ವಿರುದ್ಧ ನೆಟ್ಟಿಗರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
”ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಆಂಬ್ಯುಲೆನ್ಸ್‌ಗಳಂತಹ ಸಂದರ್ಭಗಳಲ್ಲಾದರೂ ಪೊಲೀಸರು ಮಾನವೀಯತೆ ತೋರಬೇಕು. ರಾಜಕಾರಣಿಗಳು, ಅಧಿಕಾರಿಗಳಿಗಾಗಿ ಗಂಟೆಗಟ್ಟಲೆ ರಸ್ತೆ ಬಂದ್ ಮಾಡಿ ಸಾರ್ವಜನಿಕರ ಜೀವದ ಜೊತೆ ಆಟವಾಡುವುದು ನಿಲ್ಲಬೇಕು” ಎಂದು ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.