ಯಾದಗಿರಿ: ನಗರದ ಪ್ರಮುಖ ಸಾರಿಗೆ ಕೇಂದ್ರವಾದ ಯಾದಗಿರಿ ಕೇಂದ್ರ ಬಸ್ ನಿಲ್ದಾಣವು ಇದೀಗ ದನ-ಕರುಗಳ ತಾಣವಾಗಿ ಮಾರ್ಪಟ್ಟಿದ್ದು, ಅಧಿಕಾರಿಗಳ ಘೋರ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಸಾವಿರಾರು ಸಾರ್ವಜನಿಕರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಂಚರಿಸುವ ಈ ನಿಲ್ದಾಣದ ಆವರಣದಲ್ಲಿ ಜಾನುವಾರುಗಳು ಮುಕ್ತವಾಗಿ ಅಡ್ಡಾಡುತ್ತಿವೆ. ಬಸ್ ನಿಲ್ದಾಣದ ಒಳಗೆ ಹಾಗೂ ಪ್ಲಾಟ್ಫಾರ್ಮ್ಗಳ ಬಳಿ ಧನಗಳು ನಿರ್ಭಯವಾಗಿ ಓಡಾಡುತ್ತಿರುವುದರಿಂದ ಪ್ರಯಾಣಿಕರು ಭಯದ ವಾತಾವರಣದಲ್ಲೇ ಪ್ರಯಾಣಿಸುವಂತಾಗಿದೆ. ಅಲ್ಲದೆ, ಧನಗಳು ದಿಢೀರನೆ ಬಸ್ಗಳ ಅಡ್ಡ ಬರುವುದರಿಂದ ದೊಡ್ಡ ಮಟ್ಟದ ಅಪಘಾತಗಳು ಸಂಭವಿಸುವ ಭೀತಿಯೂ ಎದುರಾಗಿದೆ.
”ಬಸ್ ನಿಲ್ದಾಣದ ಸುರಕ್ಷತೆ ಮತ್ತು ಸ್ವಚ್ಛತೆ ಕಾಪಾಡಬೇಕಾದ ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.”
ಬಸ್ ನಿಲ್ದಾಣದಲ್ಲಿ ಜಾನುವಾರುಗಳ ಹಾವಳಿಯಿಂದ ಸ್ವಚ್ಛತೆಯೂ ಸಂಪೂರ್ಣವಾಗಿ ಹಾಲಾಹಲಗೊಂಡಿದ್ದು, ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ, ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆಯು ತಕ್ಷಣವೇ ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿರುವ ಜಾನುವಾರುಗಳನ್ನು ತೆರವುಗೊಳಿಸಬೇಕು. ಪ್ರಯಾಣಿಕರಿಗೆ ಸುರಕ್ಷಿತ, ಸುಸಜ್ಜಿತ ಹಾಗೂ ಸ್ವಚ್ಛ ವಾತಾವರಣ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.