Skip to main content

Police Roundup

ಹುಬ್ಬಳ್ಳಿ: ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ವಿಮಾನ ದುರಂತ; 4 ಗಂಟೆ ಕಾಲ ಆಗಸದಲ್ಲೇ ಕಳೆದ ಪ್ರಯಾಣಿಕರು!

Share News

ಹುಬ್ಬಳ್ಳಿ: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ, ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದ ಘಟನೆ ನಡೆದಿದೆ. ತಾಂತ್ರಿಕ ದೋಷ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಸತತ ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಆತಂಕದ ಕ್ಷಣಗಳನ್ನು ಕಳೆದಿದ್ದಾರೆ.

 

ಹೈದರಾಬಾದ್‌ನಿಂದ ಹೊರಟಿದ್ದ ಫ್ಲೈ 91 (Fly 91) ಏರ್‌ಲೈನ್ಸ್ ವಿಮಾನವು ನಿಗದಿಯಂತೆ ಸಂಜೆ 4:30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ರನ್‌ವೇ ಸಮೀಪಿಸುತ್ತಿದ್ದಂತೆ ಹವಾಮಾನ ವೈಪರೀತ್ಯದಿಂದಾಗಿ ಪೈಲಟ್ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿಮಾನವು ಜೋರಾಗಿ ಅಲುಗಾಡಿದ್ದು, ಒಳಗಿದ್ದ ಪ್ರಯಾಣಿಕರು ಜೀವ ಭಯದಿಂದ ಚೀರಾಟ ನಡೆಸಿದ್ದಾರೆ. “ನಾವು ಬದುಕಿ ಮರಳುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ” ಎಂದು ಹಲವು ಪ್ರಯಾಣಿಕರು ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

 

ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಕಾರಣ ವಿಮಾನವು ಸತತ ನಾಲ್ಕು ಗಂಟೆಗಳ ಕಾಲ ಸುತ್ತಮುತ್ತಲ ಜಿಲ್ಲೆಗಳ ಆಗಸದಲ್ಲೇ ಹಾರಾಟ ನಡೆಸಿದೆ. ಇಂಧನ ಖಾಲಿಯಾಗುವ ಆತಂಕ ಹಾಗೂ ತಾಂತ್ರಿಕ ದೋಷದ ನಡುವೆಯೇ ಪೈಲಟ್ ಸುರಕ್ಷಿತ ಲ್ಯಾಂಡಿಂಗ್‌ಗಾಗಿ ಹರಸಾಹಸ ಪಟ್ಟಿದ್ದಾರೆ.

 

ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ, ಅಂತಿಮವಾಗಿ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಲಾಯಿತು. ರಾತ್ರಿ ವೇಳೆಗೆ ಬೆಂಗಳೂರಿನಲ್ಲಿ ವಿಮಾನವು ಸುರಕ್ಷಿತವಾಗಿ ಇಳಿದಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

​ಘಟನೆಯಿಂದಾಗಿ ಪ್ರಯಾಣಿಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೈರಾಣಾಗಿದ್ದು, ವಿಮಾನಯಾನ ಸಂಸ್ಥೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin