ಹೊಸಪೇಟೆ/ವಿಜಯಪುರ:
ಬೆಂಗಳೂರಿನಿಂದ ಉತ್ತರ ಕರ್ನಾಟಕದ ಭಾಗಗಳಿಗೆ ಪ್ರಯಾಣಿಸುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಟಿಕೆಟ್ ಲಭ್ಯತೆಯನ್ನು ಸುಗಮಗೊಳಿಸಲು ನೈರುತ್ಯ ರೈಲ್ವೆ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಹೊಸಪೇಟೆ ಮಾರ್ಗವಾಗಿ ಸಂಚರಿಸುವ ಯಶವಂತಪುರ-ವಿಜಯಪುರ ಹಾಗೂ ಯಶವಂತಪುರ-ಸಿಂಧನೂರು ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ 5 ಹೆಚ್ಚುವರಿ ಬೋಗಿಗಳನ್ನು ಕಾಯಂ ಆಗಿ ಅಳವಡಿಸಲು ನಿರ್ಧರಿಸಲಾಗಿದೆ.
ಈ ಹೊಸ ಬದಲಾವಣೆಯು ಇಂದು, ಮೇ 8ರಿಂದಲೇ ಜಾರಿಗೆ ಬರುತ್ತಿದ್ದು, ಪ್ರಯಾಣಿಕರ “ವೇಟಿಂಗ್ ಲಿಸ್ಟ್” ತಲೆನೋವಿಗೆ ಇದು ಬ್ರೇಕ್ ಹಾಕಲಿದೆ.
ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಎರಡು ಪ್ರಮುಖ ರೈಲುಗಳಿಗೆ ಒಟ್ಟು 10 ಬೋಗಿಗಳನ್ನು ಸೇರಿಸಲಾಗುತ್ತಿದೆ. ಅದರ ವಿವರ ಈ ಕೆಳಗಿನಂತಿದೆ:
16547/48 ಯಶವಂತಪುರ – ವಿಜಯಪುರ ಎಕ್ಸ್‌ಪ್ರೆಸ್ 1 ಎಸಿ 3-ಟೈರ್, 3 ಸ್ಲೀಪರ್, 1 ಸಾಮಾನ್ಯ ಬೋಗಿ 05
16545/46 ಯಶವಂತಪುರ – ಸಿಂಧನೂರು ಎಕ್ಸ್‌ಪ್ರೆಸ್ 1 ಎಸಿ 3-ಟೈರ್, 3 ಸ್ಲೀಪರ್, 1 ಸಾಮಾನ್ಯ ಬೋಗಿ
ಟಿಕೆಟ್ ಲಭ್ಯತೆ: ಹೆಚ್ಚುವರಿ ಬೋಗಿಗಳಿಂದಾಗಿ ಸ್ಲೀಪರ್ ಮತ್ತು ಎಸಿ ದರ್ಜೆಯಲ್ಲಿ ಹೆಚ್ಚಿನ ಸೀಟುಗಳು ಲಭ್ಯವಾಗಲಿದ್ದು, ಕೊನೆಯ ಕ್ಷಣದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ದಟ್ಟಣೆ ಇಳಿಕೆ: ಸಾಮಾನ್ಯ ದರ್ಜೆಯ ಬೋಗಿಗಳ ಸೇರ್ಪಡೆಯಿಂದ ಜನಸಾಮಾನ್ಯರಿಗೆ ನಿಂತು ಪ್ರಯಾಣಿಸುವ ಕಷ್ಟ ತಪ್ಪಲಿದೆ.
ತ್ವರಿತ ಜಾರಿ: ಮೇ 8ರಿಂದಲೇ ಯಶವಂತಪುರದಿಂದ ಹೊರಡುವ ರೈಲುಗಳಿಗೆ ಈ ಬೋಗಿಗಳು ಲಭ್ಯವಿರುತ್ತವೆ.
ಸಾರ್ವಜನಿಕರ ಒತ್ತಾಯ:
ರೈಲ್ವೆ ಇಲಾಖೆಯ ಈ ನಿರ್ಧಾರವನ್ನು ರೈಲ್ವೆ ಬಳಕೆದಾರರ ಸಮಿತಿ ಸ್ವಾಗತಿಸಿದೆ. ಆದರೆ, ಪ್ರಯಾಣಿಕರ ಸುರಕ್ಷತೆ ಮತ್ತು ವೇಗವನ್ನು ಗಮನದಲ್ಲಿಟ್ಟುಕೊಂಡು ಹಳೆಯ ಬೋಗಿಗಳ ಬದಲಿಗೆ ಆಧುನಿಕ LHB (Linke Hofmann Busch) ಬೋಗಿಗಳನ್ನು ಶೀಘ್ರವಾಗಿ ಅಳವಡಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.
ಉತ್ತರ ಕರ್ನಾಟಕಕ್ಕೆ ಪ್ರಯಾಣಿಸುವ ಸಾವಿರಾರು ಮಂದಿಗೆ ಈ ನಿರ್ಧಾರವು ವರದಾನವಾಗಲಿದ್ದು, ಇನ್ಮೇಲೆ ಟಿಕೆಟ್ ಟೆನ್ಷನ್ ಇಲ್ಲದೆ ಆರಾಮವಾಗಿ ಪ್ರಯಾಣಿಸಬಹುದು.