ರಾಮದುರ್ಗ: ಪ್ರಿಯಕರನ ಜೊತೆ ಸೇರಿ ಜೀವನ ನಡೆಸಲು ಸ್ವಂತ ಪತಿಯ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕಟಕೋಳ ಪೊಲೀಸರು ಕೇವಲ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಬಂಧಿತರನ್ನು ಹಸೀನಾ ನದಾಫ್ ಹಾಗೂ ಆಕೆಯ ಪ್ರಿಯಕರ ಹಣಮಂತ ಮಾರಾಪೂರ ಎಂದು ಗುರುತಿಸಲಾಗಿದೆ.
ಮೂಲತಃ ಮೂಡಲಗಿ ತಾಲೂಕಿನವಳಾದ ಹಸೀನಾ ನದಾಫ್ಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಹೊಸಕೋಟಿ ಗ್ರಾಮದ ಶರೀಫ್ ಎಂಬುವವರೊಂದಿಗೆ ವಿವಾಹವಾಗಿತ್ತು. ಮದುವೆಯಾದರೂ ಸಹ ಹಸೀನಾ ತನ್ನ ಪ್ರಿಯಕರ ಹಣಮಂತನ ಜೊತೆ ಸಂಪರ್ಕ ಮುಂದುವರಿಸಿದ್ದಳು. ಪ್ರಿಯಕರನ ಜೊತೆ ಓಡಿಹೋಗಲು ಸಂಚು ರೂಪಿಸಿದ್ದ ಈಕೆ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಲು ನಿರ್ಧರಿಸಿದ್ದಳು.
ಯೋಜನೆಯಂತೆ ಹಸೀನಾ ಮತ್ತು ಹಣಮಂತ ಸೇರಿ ಮನೆಯಲ್ಲಿದ್ದ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಹಾಗೂ 11 ಸಾವಿರ ರೂಪಾಯಿ ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ದಿಲಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದ ತಂಡ ತನಿಖೆ ಕೈಗೆತ್ತಿಕೊಂಡಿತ್ತು. ಕೃತ್ಯ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಗಳಾದ ಹಸೀನಾ ಮತ್ತು ಹಣಮಂತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಬಂಧಿತರಿಂದ ಕಳುವಾಗಿದ್ದ ಎಲ್ಲಾ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸರ ಈ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.