Police Roundup

“ನಾನು ನಾಲ್ಕು ಮದುವೆಯಾಗಬಲ್ಲೆ, ನೀನು ಪ್ರಶ್ನಿಸುವಂತಿಲ್ಲ”: ಮದುವೆಯ ಮೊದಲ ರಾತ್ರಿಯೇ ಪತ್ನಿಗೆ ಪತಿಯ ಬೆದರಿಕೆ!

Share News

ಕಾನ್ಪುರ: ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ವೈದ್ಯೆಯೊಬ್ಬರಿಗೆ ವಿವಾಹದ ಮೊದಲ ದಿನವೇ ಪತಿ ಆಘಾತ ನೀಡಿದ್ದಾನೆ. “ನಾನು ನಾಲ್ಕು ಮದುವೆಗಳನ್ನು ಮಾಡಿಕೊಳ್ಳಬಲ್ಲೆ, ನನಗೆ ಅನೇಕ ಅಫೇರ್‌ಗಳಿವೆ” ಎಂದು ಮದುವೆಯ ಮೊದಲ ರಾತ್ರಿಯೇ ಬೆದರಿಕೆ ಹಾಕುವ ಮೂಲಕ ಪತಿಯ ಅಸಲಿ ಮುಖ ಅನಾವರಣಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 

ಕಾನ್ಪುರದ ಮಹಿಳಾ ವೈದ್ಯೆಯೊಬ್ಬರಿಗೆ ಮ್ಯಾರೇಜ್ ಸೈಟ್ ಮೂಲಕ ಸಂಭಲ್ ಜಿಲ್ಲೆಯ ವ್ಯಾಪಾರ ಕುಟುಂಬದ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಅದ್ಧೂರಿಯಾಗಿ ವಿವಾಹ ನೆರವೇರಿತ್ತು. ಆದರೆ ಸಂಭ್ರಮದಿಂದ ಪತಿಯ ಮನೆಗೆ ಬಂದ ವೈದ್ಯೆಗೆ ಮೊದಲ ದಿನವೇ ಪತಿಯ ಕ್ರೂರ ಬುದ್ಧಿಯ ದರ್ಶನವಾಗಿದೆ.

 

ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ಮದುವೆಯಾದ ಮೊದಲ ರಾತ್ರಿಯೇ ಪತಿ ತನ್ನ ಅಸಲಿ ಬಣ್ಣ ಬಯಲು ಮಾಡಿದ್ದಾನೆ. “ನೀನು ಈ ಮನೆಯಲ್ಲಿ ಕೇವಲ ಕೆಲಸದಾಕೆಯಂತೆ ಇರಬೇಕು. ನನಗೆ ಈಗಾಗಲೇ ಅನೇಕ ಹುಡುಗಿಯರ ಜೊತೆ ಸಂಬಂಧವಿದೆ. ನಾನು ಎಷ್ಟು ಮದುವೆ ಬೇಕಾದರೂ ಮಾಡಿಕೊಳ್ಳಬಲ್ಲೆ, ನೀನು ಇದನ್ನು ಪ್ರಶ್ನಿಸುವಂತಿಲ್ಲ” ಎಂದು ಎಚ್ಚರಿಸಿದ್ದಾನೆ. ಕೇವಲ ವರದಕ್ಷಿಣೆಗಾಗಿ ಈತ ಮದುವೆಯ ನಾಟಕವಾಡಿದ್ದ ಎಂಬುದು ಸಂತ್ರಸ್ತೆಯ ಗಂಭೀರ ಆರೋಪವಾಗಿದೆ.

 

ವೈದ್ಯೆಯ ಆರೋಪದ ಪ್ರಕಾರ, ಅವರು ಮೊದಲ ಮತ್ತು ಎರಡನೇ ಬಾರಿ ಗರ್ಭಿಣಿಯಾದಾಗ, ಪತಿ ಹಾಗೂ ಅತ್ತೆ-ಮಾವ ಸೇರಿ ಬಲವಂತವಾಗಿ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದಾರೆ. ಮೂರನೇ ಬಾರಿ ಗರ್ಭಿಣಿಯಾದಾಗ ಜೀವ ಉಳಿಸಿಕೊಳ್ಳಲು ತವರು ಮನೆಗೆ ಓಡಿಬಂದ ವೈದ್ಯೆ, ಅಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪತ್ನಿ ತವರು ಮನೆಯಲ್ಲಿದ್ದಾಗಲೇ ಪತಿ ತನ್ನ ಪ್ರಿಯತಮೆಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ.

 

ಆರೋಪಿ ಕುಟುಂಬಕ್ಕೆ ರಾಜಕೀಯ ಪ್ರಭಾವ ಇರುವುದರಿಂದ ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತೆ ದೂರಿದ್ದಾರೆ. ತನಗೂ ಮತ್ತು ತನ್ನ ಮಗುವಿಗೆ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು 13 ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin