ನವದೆಹಲಿ: ಅಂತರರಾಷ್ಟ್ರೀಯ ಮಾದಕ ವಸ್ತು ಸಿಂಡಿಕೇಟ್‌ಗಳು ಹಾಗೂ ಭಯೋತ್ಪಾದಕ ನಿಧಿ (Terror Funding) ಜಾಲದ ವಿರುದ್ಧ ಭಾರತೀಯ ಭದ್ರತಾ ಪಡೆಗಳು ಮತ್ತು ಮಾದಕ ವಸ್ತು ನಿಯಂತ್ರಣ ಬ್ಯುರೋ (NCB) ಇತಿಹಾಸದಲ್ಲೇ ಅತ್ಯಂತ ಪ್ರಮುಖ ಹಾಗೂ ಅಭೂತಪೂರ್ವ ಯಶಸ್ಸನ್ನು ಸಾಧಿಸಿವೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅತ್ಯಂತ ಅಪಾಯಕಾರಿ ಹಾಗೂ ಸೈನಿಕರನ್ನು ಕ್ರೂರಿಗಳನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿರುವ ‘ಕ್ಯಾಪ್ಟಗನ್’ (Captagon) ಎಂಬ ಮಾದಕ ವಸ್ತುವಿನ ಬೃಹತ್ ಜಾಲವನ್ನು ಭೇದಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಈ ಮಹತ್ವದ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದ್ದು, ‘ಆಪರೇಷನ್ ರೇಜ್ ಪಿಲ್’ (Operation RAGEPILL) ಅಡಿಯಲ್ಲಿ ಭದ್ರತಾ ಸಂಸ್ಥೆಗಳು ಬರೋಬ್ಬರಿ 182 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿವೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಅಂತರರಾಷ್ಟ್ರೀಯ ಡ್ರಗ್ ಲಾ ಎನ್‌ಫೋರ್ಸ್‌ಮೆಂಟ್ ಏಜೆನ್ಸಿಯಿಂದ ಸಿಕ್ಕ ರಹಸ್ಯ ಮಾಹಿತಿಯ ಆಧಾರದ ಮೇಲೆ ಎನ್‌ಸಿಬಿ (NCB) ಈ ಬೃಹತ್ ಜಾಲದ ಬೆನ್ನು ಬಿದ್ದಿತ್ತು. ಭಾರತವನ್ನು ಕೇವಲ ಟ್ರಾನ್ಸಿಟ್ ರೂಟ್ (ಮಧ್ಯ ಪ್ರಾಚ್ಯ ದೇಶಗಳಿಗೆ ಸಾಗಿಸುವ ಮಾರ್ಗ) ಆಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆಗಿದ್ದರು.
ದೆಹಲಿಯಲ್ಲಿ ಮೊದಲ ದಾಳಿ: ಮೇ 11 ರಂದು ದೆಹಲಿಯ ನೆಬ್ ಸರಾಯ್ (Neb Sarai) ಪ್ರದೇಶದಲ್ಲಿರುವ ಬಾಡಿಗೆ ಮನೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಕಮರ್ಷಿಯಲ್ ಚಪಾತಿ ಕತ್ತರಿಸುವ ಯಂತ್ರದೊಳಗೆ ಅಡಗಿಸಿಟ್ಟಿದ್ದ 31.5 ಕೆಜಿ ತೂಕದ ಕ್ಯಾಪ್ಟಗನ್ ಮಾತ್ರೆಗಳನ್ನು ಜಪ್ತಿ ಮಾಡಿದರು. ಇದನ್ನು ಸೌದಿ ಅರೇಬಿಯಾದ ಜಿದ್ದಾ ನಗರಕ್ಕೆ ರಫ್ತು ಮಾಡಲು ಸಿದ್ಧತೆ ನಡೆಸಲಾಗಿತ್ತು.
ಮುದ್ರಾ ಬಂದರಿನಲ್ಲಿ ಎರಡನೇ ಬೇಟೆ: ಬಂಧಿತ ಆರೋಪಿಯ ವಿಚಾರಣೆಯಿಂದ ಸಿಕ್ಕ ಮಾಹಿತಿಯ ಆಧಾರದ ಮೇಲೆ ಮೇ 14 ರಂದು ಗುಜರಾತ್‌ನ ಮುದ್ರಾ ಬಂದರಿನಲ್ಲಿ (Mundra Port) ಕಂಟೈನರ್ ಒಂದನ್ನು ತಪಾಸಣೆ ನಡೆಸಲಾಯಿತು. ಸಿರಿಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಈ ಕಂಟೈನರ್‌ನಲ್ಲಿ ‘ಕುರಿ ಉಣ್ಣೆ’ (Sheep Wool) ಇದೆ ಎಂದು ಘೋಷಿಸಲಾಗಿತ್ತು. ಆದರೆ ತೀವ್ರ ಶೋಧದ ಬಳಿಕ ಅದರಲ್ಲಿದ್ದ 3 ಚೀಲಗಳಿಂದ ಸುಮಾರು 196.2 ಕೆಜಿ ತೂಕದ ಕ್ಯಾಪ್ಟಗನ್ ಪೌಡರ್ ಪತ್ತೆಯಾಗಿದೆ.
ಒಟ್ಟು ಜಪ್ತಿ: ಕಾರ್ಯಾಚರಣೆಯಲ್ಲಿ ಒಟ್ಟು 227.7 ಕೆಜಿ ಕ್ಯಾಪ್ಟಗನ್ ಮಾತ್ರೆ ಹಾಗೂ ಪೌಡರ್ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ₹182 ಕೋಟಿ ಎಂದು ಅಂದಾಜಿಸಲಾಗಿದೆ.
ಈ ಜಾಲದ ಪ್ರಮುಖ ಸೂತ್ರಧಾರ, ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಸಿರಿಯಾ ದೇಶದ ಪ್ರಜೆಯನ್ನು ಎನ್‌ಸಿಬಿ ಬಂಧಿಸಿದೆ. ಈತ 2024ರ ನವೆಂಬರ್ 15ರಂದು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದನು. ಜನವರಿ 12, 2025ಕ್ಕೆ ಈತನ ವೀಸಾ ಅವಧಿ ಮುಗಿದಿದ್ದರೂ, ಅಕ್ರಮವಾಗಿ ಭಾರತದಲ್ಲೇ ಉಳಿದುಕೊಂಡು ಈ ಅಂತರರಾಷ್ಟ್ರೀಯ ಸ್ಮಗ್ಲಿಂಗ್ ನೆಟ್‌ವರ್ಕ್ ಮುನ್ನಡೆಸುತ್ತಿದ್ದನು. ಮಧ್ಯಪ್ರಾಚ್ಯದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳೊಂದಿಗೆ ಈತನಿಗೆ ಇರುವ ನಂಟು ಮತ್ತು ಹವಾಲಾ ಹಣದ ವಹಿವಾಟಿನ ಕುರಿತು ಈಗ ತನಿಖೆ ತೀವ್ರಗೊಂಡಿದೆ.
ಕ್ಯಾಪ್ಟಗನ್ ಎಂಬುದು ಆಂಫೆಟಮೈನ್ (Amphetamine) ಗುಂಪಿಗೆ ಸೇರಿದ ಅತ್ಯಂತ ವ್ಯಸನಕಾರಿ ಸಿಂಥೆಟಿಕ್ ಮಾದಕ ವಸ್ತುವಾಗಿದೆ. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ “ಜಿಹಾದಿ ಡ್ರಗ್” ಅಥವಾ “ಬಡವರ ಕೊಕೇನ್” ಎಂದೂ ಕರೆಯಲಾಗುತ್ತದೆ.
ಭಯ ಹುಟ್ಟಿಸದ ಮಾತ್ರೆ: ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ (ವಿಶೇಷವಾಗಿ ISIS ನಂತಹ ಉಗ್ರ ಸಂಘಟನೆಗಳು) ಉಗ್ರರು ಯುದ್ಧದ ವೇಳೆ ದಿನಗಟ್ಟಲೆ ನಿದ್ದೆ ಇಲ್ಲದೆ ಇರಲು, ಹಸಿವು-ದಣಿವು ಮರೆಯಲು ಮತ್ತು ಮನಸ್ಸಿನಲ್ಲಿ ಕರುಣೆ ಅಥವಾ ಭಯ ಇಲ್ಲದಂತೆ ಕ್ರೂರಿಗಳಾಗಿ ವರ್ತಿಸಲು ಈ ಮಾತ್ರೆಯನ್ನು ಬಳಸುತ್ತಾರೆ.
ಟೆರರ್ ಫಂಡಿಂಗ್ ಮೂಲ: ಈ ಡ್ರಗ್ಸ್ ಮಾರಾಟದಿಂದ ಬರುವ ಕೋಟ್ಯಂತರ ರೂಪಾಯಿ ಹಣವನ್ನು ಉಗ್ರ ಸಂಘಟನೆಗಳು ತಮ್ಮ ವಿಧ್ವಂಸಕ ಕೃತ್ಯಗಳಿಗೆ ಮತ್ತು ಶಸ್ತ್ರಾಸ್ತ್ರ ಖರೀದಿಗೆ (Terror Funding) ಬಳಸಿಕೊಳ್ಳುತ್ತವೆ.
ಈ ಐತಿಹಾಸಿಕ ಯಶಸ್ಸಿನ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿಯವರ ‘ಡ್ರಗ್ಸ್ ಮುಕ್ತ ಭಾರತ’ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.
”ಆಪರೇಷನ್ ರೇಜ್ ಪಿಲ್ ಮೂಲಕ ನಮ್ಮ ಸಂಸ್ಥೆಗಳು ದೇಶದಲ್ಲೇ ಮೊದಲ ಬಾರಿಗೆ ₹182 ಕೋಟಿ ಮೌಲ್ಯದ ‘ಜಿಹಾದಿ ಡ್ರಗ್’ ಕ್ಯಾಪ್ಟಗನ್ ಅನ್ನು ವಶಪಡಿಸಿಕೊಂಡಿರುವುದು ಸಂತಸ ತಂದಿದೆ. ಭಾರತದ ಭೂಪ್ರದೇಶವನ್ನು ಟ್ರಾನ್ಸಿಟ್ ರೂಟ್ ಆಗಿ ಬಳಸಿಕೊಂಡು ದೇಶದ ಒಳಗೆ ಬರುವ ಅಥವಾ ದೇಶದಿಂದ ಹೊರಗೆ ಹೋಗುವ ಪ್ರತಿಯೊಂದು ಗ್ರಾಂ ಮಾದಕ ವಸ್ತುವನ್ನು ನಾವು ಮಟ್ಟಹಾಕುತ್ತೇವೆ. ಎನ್‌ಸಿಬಿಯ ಧೀರ ಅಧಿಕಾರಿಗಳಿಗೆ ನನ್ನ ಅಭಿನಂದನೆಗಳು,” ಎಂದು ಅವರು ಹೇಳಿದ್ದಾರೆ.
ಭಾರತವನ್ನು ಅಂತರರಾಷ್ಟ್ರೀಯ ಡ್ರಗ್ಸ್ ಸಾಗಾಟದ ಕೇಂದ್ರವನ್ನಾಗಿ ಮಾಡಲು ಹೊರಟಿದ್ದ ಜಾಗತಿಕ ಸಿಂಡಿಕೇಟ್‌ಗೆ ಈ ಕಾರ್ಯಾಚರಣೆ ಭಾರಿ ದೊಡ್ಡ ಆಘಾತ ನೀಡಿದೆ.
ಕ್ರೈಂ ವಿಶೇಷ ವರದಿ
ಪೊಲೀಸ್ ರೌಂಡಪ್
ಪ್ರಧಾನ ಸಂಪಾದಕರು: ತ್ಯಾಗರಾಜ್
ಮುಖ್ಯ ವರದಿಗಾರರು: ಚಂದ್ರಶೇಖರ್