ಹುಬ್ಬಳ್ಳಿ: ಬದುಕು ಯಾವಾಗ, ಯಾರನ್ನು, ಹೇಗೆ ಪರೀಕ್ಷಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಿಧಿಯ ಆಟದ ಮುಂದೆ ಅದೆಷ್ಟೋ ಕನಸುಗಳು ನುಚ್ಚುನೂರಾಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (M.Sc Mathematics) ಪಡೆದು, ಚಿನ್ನದ ಪದಕ (Gold Medalist) ಮುಡಿಗೇರಿಸಿಕೊಂಡಿದ್ದ ಸುಪ್ರಿತಾ ಅವರ ಜೀವನ. ವಿವಾಹವಾದ ಕೆಲವೇ ದಿನಗಳಲ್ಲಿ ಪತಿಯನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಿದ್ದ ಹೆಣ್ಣುಮಗಳು, ಇಂದು ಯಾರ ಮುಂದೆಯೂ ಕೈಚಾಚದೆ ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಡೆಲಿವರಿ ಗರ್ಲ್ ಆಗಿ ಕಾರ್ಯನಿರ್ವಹಿಸುತ್ತಾ ಯುವ ಪೀಳಿಗೆಗೆ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದಾರೆ.
ಉನ್ನತ ಶಿಕ್ಷಣ ಮುಗಿಸಿ, ಚಿನ್ನದ ಪದಕದೊಂದಿಗೆ ಭವಿಷ್ಯದ ದೊಡ್ಡ ಕನಸು ಹೊತ್ತಿದ್ದ ಸುಪ್ರಿತಾ ಅವರ ವಿವಾಹ ಇತ್ತೀಚೆಗಷ್ಟೇ ನಡೆದಿತ್ತು. ಆದರೆ, ವಿಧಿ ಇವರ ಪಾಲಿಗೆ ಅತ್ಯಂತ ಕ್ರೂರವಾಗಿ ವರ್ತಿಸಿತು. ಮದುವೆಯಾಗಿ ಕೆಲವೇ ದಿನಗಳು ಕಳೆಯುವಷ್ಟರಲ್ಲಿ ಇವರ ಪತಿ ದಿಢೀರನೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಪತಿಯ ಅಕಾಲಿಕ ಮರಣ ಸುಪ್ರಿತಾ ಮತ್ತು ಅವರ ಕುಟುಂಬದ ಜಗತ್ತನ್ನೇ ಉಲ್ಟಾಪಲ್ಟಾ ಮಾಡಿತು. ಹಸನ್ಮುಖಿಯಾಗಿದ್ದ ಹೆಣ್ಣುಮಗಳ ಬಾಳಿಗೆ ಒಂದೇ ಸಮನೆ ಕತ್ತಲೆ ಆವರಿಸಿತು.
ಪತಿಯ ಅಗಲಿಕೆಯಿಂದ ಮನೆಯ ಜವಾಬ್ದಾರಿ, ದಿನನಿತ್ಯದ ಖರ್ಚು ವೆಚ್ಚಗಳು ಮತ್ತು ಬದುಕಿನ ಅನಿವಾರ್ಯತೆಗಳು ಬೆಟ್ಟದಂತೆ ಸುಪ್ರಿತಾ ಅವರ ಹೆಗಲ ಮೇಲೆ ಬಿದ್ದವು. ಆದರೆ, ಈ ಸ್ವಾಭಿಮಾನಿ ಹೆಣ್ಣುಮಗಳು ಧೃತಿಗೆಡಲಿಲ್ಲ. ತನಗೊದಗಿದ ಕತ್ತಲೆಯ ಕಾರ್ಮೋಡಕ್ಕೆ ಪರ್ಯಾಯ ಮಾರ್ಗ ಹುಡುಕಿದ ಅವರು, ಯಾರಿಗೂ ಹೊರೆಯಾಗಬಾರದು ಎಂದು ನಿರ್ಧರಿಸಿದರು.
ಇಂದು ದಿನವೂ ಬೆಳಗ್ಗೆಯೇ ಹೆಗಲಿಗೆ ದೊಡ್ಡ ಡೆಲಿವರಿ ಬ್ಯಾಗ್ ಏರಿಸಿಕೊಂಡು ಬೈಕ್ ಹತ್ತುವ ಸುಪ್ರಿತಾ, ವಾಣಿಜ್ಯ ನಗರಿ ಹುಬ್ಬಳ್ಳಿಯ ಓಣಿ ಓಣಿಗಳಲ್ಲಿ ದಿನಸಿ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಗಣಿತದ ಕಠಿಣ ಲೆಕ್ಕಾಚಾರಗಳನ್ನು ಬಿಡಿಸುತ್ತಿದ್ದ ಕೈಗಳು, ಇಂದು ಜೀವನದ ಕಠಿಣ ಲೆಕ್ಕಾಚಾರವನ್ನು ಅಷ್ಟೇ ಧೈರ್ಯದಿಂದ ಎದುರಿಸುತ್ತಿವೆ.
ಕೇವಲ ಒಂದು ಸಣ್ಣ ಡಿಗ್ರಿ ಮುಗಿಸಿ “ಕೆಲಸ ಸಿಗುತ್ತಿಲ್ಲ” ಎಂದು ನೆಪ ಹೇಳುತ್ತಾ, ಖಿನ್ನತೆಗೆ (Depression) ಒಳಗಾಗುವ ಇಂದಿನ ಯುವ ಪೀಳಿಗೆಗೆ ಸುಪ್ರಿತಾ ಅವರ ಜೀವನ ಒಂದು ದಿಕ್ಸೂಚಿಯಾಗಿದೆ. ಉನ್ನತ ಶಿಕ್ಷಣ, ಅದೂ ಚಿನ್ನದ ಪದಕವಿದ್ದರೂ ಬದುಕಿನ ಅನಿವಾರ್ಯತೆಗೆ ತಕ್ಕಂತೆ ಯಾವುದೇ ಕೆಲಸ ಸಣ್ಣದಲ್ಲ ಎಂದು ಸಾಬೀತುಪಡಿಸಿದ ಇವರ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ವಿಧಿಯ ಕ್ರೂರ ಆಟಕ್ಕೆ ಬೆನ್ನು ತೋರಿಸದೆ, ಸ್ವಾಭಿಮಾನದಿಂದ ಬದುಕಿನ ಜಟಕಾ ಬಂಡಿ ಎಳೆಯುತ್ತಿರುವ ಸಹೋದರಿ ಸುಪ್ರಿತಾ ಅವರಿಗೆ ಮುಂದಿನ ಜೀವನದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ, ಅವರ ಈ ಕಠಿಣ ಪರಿಶ್ರಮಕ್ಕೆ ತಕ್ಕ ಉನ್ನತ ಗೌರವ ಶೀಘ್ರದಲ್ಲೇ ಸಿಗಲಿ ಎಂದು ಹುಬ್ಬಳ್ಳಿ ಜನತೆ ಹಾಗೂ ನೆಟ್ಟಿಗರು ಹಾರೈಸುತ್ತಿದ್ದಾರೆ.