Skip to main content

Police Roundup

ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಕಾರು ಡಿಕ್ಕಿ; ಬೆನ್ನುಮೂಳೆ, ಕಾಲಿಗೆ ತೀವ್ರ ಗಾಯ

Share News

ಮಂಗಳೂರು: ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಾಲ್‌ಬಾಗ್ ಜಂಕ್ಷನ್ ಬಳಿ ಮಂಗಳವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ಕರ್ತವ್ಯ ನಿರತರಾಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಅತಿವೇಗ ಹಾಗೂ ನಿರ್ಲಕ್ಷ್ಯದ ಕಾರು ಡಿಕ್ಕಿಯಾಗಿದ್ದು, ಪರಿಣಾಮ ಓರ್ವ ಸಿಬ್ಬಂದಿಯ ಬೆನ್ನುಮೂಳೆ ಮತ್ತು ಕಾಲು ಮುರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಮಂಗಳವಾರ ರಾತ್ರಿ ಸುಮಾರು 11:30ರ ವೇಳೆಗೆ ಬಳ್ಳಾಲ್‌ಬಾಗ್ ಜಂಕ್ಷನ್ ಬಳಿ ನಡೆದಿದ್ದ ಅಪಘಾತ ಪ್ರಕರಣವೊಂದರ ಪರಿಶೀಲನೆ ನಡೆಸಲು ಬರ್ಕೆ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಕುಮಾರ್ ಮತ್ತು ವಿಠಲದಾಸ್ ಅವರು ಸ್ಥಳಕ್ಕೆ ಧಾವಿಸಿದ್ದರು. ಪರಿಶೀಲನೆ ಮುಗಿಸಿ ಅವರಿಬ್ಬರು ರಸ್ತೆ ಬದಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ, ಧೀರಜ್ ರೈ ಎಂಬಾತ ಚಲಾಯಿಸುತ್ತಿದ್ದ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ಇಬ್ಬರು ಸಿಬ್ಬಂದಿಗೂ ಡಿಕ್ಕಿ ಹೊಡೆದಿದೆ.

 

ಡಿಕ್ಕಿಯ ರಭಸಕ್ಕೆ ಸಿಬ್ಬಂದಿ ವಿಠಲದಾಸ್ ಅವರು ರಸ್ತೆಗೆ ಬಿದ್ದಿದ್ದು, ಕಾರಿನ ಎಡಭಾಗದ ಚಕ್ರ ಅವರ ಕಾಲಿನ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ಅವರ ಕಾಲು ಹಾಗೂ ಬೆನ್ನುಮೂಳೆಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ಕೊಡಿಯಾಲಬೈಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

 

ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಚಾಲನೆ ಮಾಡಿದ ಕಾರು ಚಾಲಕ ಧೀರಜ್ ರೈ ವಿರುದ್ಧ ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 125(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin