ಮೈಸೂರು: ಮಹಾರಾಷ್ಟ್ರ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನೀಡಿದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೈಸೂರು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ದಂಧೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, 3 ಆನೆ ದಂತದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನ ರಾಮಕೃಷ್ಣನಗರದ ‘ಐ’ ಬ್ಲಾಕ್ನ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ ಕೆಲವರು ಕಾನೂನುಬಾಹಿರವಾಗಿ ಆನೆ ದಂತಗಳನ್ನು ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಮೈಸೂರು ವಲಯದ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಸ್ಥಳಕ್ಕೆ ದಾಳಿ ನಡೆಸಿದಾಗ, ಮೂರು ಆನೆ ದಂತದ ತುಂಡುಗಳು ಪತ್ತೆಯಾಗಿವೆ.
ಸ್ಥಳದಲ್ಲಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ವಶಕ್ಕೆ ಪಡೆದು, ಆನೆ ದಂತದ ತುಂಡುಗಳನ್ನು ಇಲಾಖಾ ಪರ ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಈ ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೋರ್ವ ಪ್ರಮುಖ ಆರೋಪಿ ಕೊಳ್ಳೆಗಾಲದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಕೊಳ್ಳೆಗಾಲಕ್ಕೆ ತೆರಳಿದ ಅಧಿಕಾರಿಗಳ ತಂಡ ನಾಲ್ಕನೇ ಆರೋಪಿಯನ್ನೂ ಬಂಧಿಸಿ ಮೈಸೂರಿಗೆ ಕರೆತಂದಿದೆ. ಬಂಧಿತ ನಾಲ್ಕೂ ಜನ ಆರೋಪಿಗಳನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಅಪರಾಧ ವರದಿ (WLOR) ಸಂಖ್ಯೆ: 01/2026-27, ದಿನಾಂಕ: ಮೇ 27 ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ:
ಈ ಯಶಸ್ವಿ ಕಾರ್ಯಾಚರಣೆಯನ್ನು ಮೈಸೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಕೆ. ಪರಮೇಶ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಜಿ. ವಿನೀತ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ದಾಳಿಯಲ್ಲಿ ಮೈಸೂರು ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ (RFO) ಮುಹಮ್ಮದ್ ಜೀಷಾನ್, ಉಪ ವಲಯ ಅರಣ್ಯಾಧಿಕಾರಿಗಳಾದ (DRFO) ಕನಿಕ, ಜಿ.ವಿ. ಮಹೇಶ್, ಬಿ.ಎ. ಸತೀಶ್, ಸಿ. ಸಚಿನ್, ಸಂಜೀವ ಕೆ. ಪಾಟೀಲ, ಗಸ್ತು ಅರಣ್ಯ ಪಾಲಕರಾದ ನಾಗರಾಜ ಎಸ್. ಲಮಾಣಿ, ಸಂತೋಷ್ ನಾಯಕ್, ವಿನಾಯಕ ಎಸ್. ಶಂಖವಾಸಿ, ವಿರೂಪಾಕ್ಷ, ಅರಣ್ಯ ವೀಕ್ಷಕರಾದ ಲಕ್ಷ್ಮಿಪಾಟೀಲ್, ಸುನಂದ ಶಿವಪ್ಪ ನಿಗಧಿ ಹಾಗೂ ವಾಹನ ಚಾಲಕರಾದ ಗಣೇಶ್ ಮತ್ತು ಮಂಜುನಾಥ್ ಪಾಲ್ಗೊಂಡಿದ್ದರು.