Police Roundup

ಚಲಿಸುವ ಬಸ್ಸಿನ ಗೇರ್ ಬಾಕ್ಸ್ ಮೇಲೆ ಕುಳಿತು ಚಾಲಕನ ಜೊತೆ ಯುವತಿ ಅಸಭ್ಯ ವರ್ತನೆ!

Share News

ಕೋಯಮತ್ತೂರು: ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಖಾಸಗಿ ಬಸ್ಸೊಂದರಲ್ಲಿ ಯುವತಿಯೊಬ್ಬಳು ಚಾಲಕನ ಪಕ್ಕದ ಗೇರ್ ಬಾಕ್ಸ್ ಮೇಲೆ ಕುಳಿತು, ಆತನ ಗಮನ ತಪ್ಪಿಸುವಂತೆ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡಿದ ಚಾಲಕ ಹಾಗೂ ಯುವತಿಯ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ.

 

ತಮಿಳುನಾಡಿನ ಕೋಯಮತ್ತೂರಿನ ಶಿವಾನಂದ ಕಾಲೋನಿಯಿಂದ ರಾಮನಾಥಪುರಂ ಮಾರ್ಗವಾಗಿ ಚಲಿಸುವ ರೂಟ್ ನಂಬರ್ 5ರ ಖಾಸಗಿ ಬಸ್ಸಿನಲ್ಲಿ ಪ್ರತಿದಿನ ನೂರಾರು ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಎಂದಿನಂತೆ ನಿನ್ನೆ ಕೂಡ ಬಸ್ಸು ಡೌನ್ ಹಾಲ್‌ನಿಂದ ಶಿವಾನಂದ ಕಾಲೋನಿಗೆ ಹೋಗುತ್ತಿತ್ತು. ಈ ವೇಳೆ ಬಸ್ಸಿಗೆ ಹತ್ತಿದ ಯುವತಿಯೊಬ್ಬಳು ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊಳ್ಳದೆ, ನೇರವಾಗಿ ಡ್ರೈವರ್ ಸೀಟಿನ ಪಕ್ಕದಲ್ಲೇ ಇರುವ ಇಂಜಿನ್ ಬಾನೆಟ್ ಹಾಗೂ ಗೇರ್ ಬಾಕ್ಸ್ ಮೇಲೆಯೇ ಆಸನ ಜಮಾಯಿಸಿದ್ದಾಳೆ.

 

ಬಸ್ಸು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿರುವಾಗಲೇ ಆ ಯುವತಿ ಚಾಲಕನಿಗೆ ತೀರಾ ಹತ್ತಿರವಾಗಿ ಕುಳಿತುಕೊಂಡು, ಆತನೊಂದಿಗೆ ಸಲುಗೆಯಿಂದ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಾಳೆ. ಗೇರ್ ಬದಲಾಯಿಸುವ ಜಾಗದಲ್ಲೇ ಕುಳಿತುಕೊಂಡು ಚಾಲನೆಗೆ ಅಡ್ಡಿಪಡಿಸುತ್ತಿದ್ದರೂ, ಆ ರೋಮಿಯೋ ಚಾಲಕ ಮಾತ್ರ ಅದನ್ನು ತಡೆಯದೇ, ಆಕೆಯೊಂದಿಗೆ ಹರಟೆ ಹೊಡೆಯುತ್ತಾ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಬಸ್ ಚಲಾಯಿಸಿದ್ದಾನೆ. ಚಾಲಕನ ಈ ಬೇಜವಾಬ್ದಾರಿ ತನದಿಂದಾಗಿ ಯಾವುದೇ ಕ್ಷಣದಲ್ಲೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಯಿತ್ತು.

 

ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಇವರಿಬ್ಬರ ಈ ಅತಿರೇಕದ ಹಾಗೂ ಅಪಾಯಕಾರಿ ವರ್ತನೆಯನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರಹಸ್ಯವಾಗಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

 

ಖಾಸಗಿ ಬಸ್ ಚಾಲಕರಿಗೆ ಸಾರ್ವಜನಿಕರ ಪ್ರಾಣ ಎಂದರೆ ಅಷ್ಟೊಂದು ಹಗುರವೇ? ಇಂತಹ ಬೇಜವಾಬ್ದಾರಿ ಚಾಲಕರ ಲೈಸೆನ್ಸ್ ಅನ್ನು ತಕ್ಷಣವೇ ರದ್ದು ಮಾಡಬೇಕು ಮತ್ತು ಬಸ್ ಚಲಾಯಿಸುವಾಗ ಅಡ್ಡಿಪಡಿಸಿದ ಯುವತಿಯ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO) ಮತ್ತು ಪೊಲೀಸರನ್ನು ಒತ್ತಾಯಿಸಿದ್ದಾರೆ.

​ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸ್ಥಳೀಯ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ನಂಬರ್ ಆಧರಿಸಿ ಚಾಲಕ ಹಾಗೂ ಖಾಸಗಿ ಬಸ್ ಮಾಲೀಕನಿಗೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin