ಹಾಸನ: ಜಿಲ್ಲೆಯ ಹೂವಿನಹಳ್ಳಿ ಕಾವಲು ಗ್ರಾಮದಲ್ಲಿ ಹಗಲಿನ ವೇಳೆಯಲ್ಲೇ ಭೀಕರ ಕಳ್ಳತನ ನಡೆದಿದ್ದು, ಜಮೀನಿಗೆ ಮಾಲೀಕರು ತೆರಳಿದ್ದ ಸಮಯ ಸಾಧಿಸಿ ಮನೆಯ ಹೆಂಚು ತೆಗೆದು ಒಳನುಗ್ಗಿದ ಖದೀಮರು ಬರೋಬ್ಬರಿ ₹12.04 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಗ್ರಾಮದ ನಿವಾಸಿ ರಮೇಶ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮೇ 31ರಂದು ಬೆಳಿಗ್ಗೆ 9 ಗಂಟೆಗೆ ರಮೇಶ್ ಅವರು ತಮ್ಮ ಮನೆಗೆ ಬೀಗ ಹಾಕಿ ಜಮೀನಿಗೆ ಕೆಲಸಕ್ಕೆ ತೆರಳಿದ್ದರು. ಸಂಜೆ 5.30ರ ಸುಮಾರಿಗೆ ಕೆಲಸ ಮುಗಿಸಿ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ರಮೇಶ್ ಅವರು ಮನೆಗೆ ಬಂದು ನೋಡಿದಾಗ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದಿರುವುದು ಕಂಡುಬಂದಿದೆ. ಆತಂಕದಿಂದ ಒಳಗೆ ಹೋಗಿ ಪರಿಶೀಲಿಸಿದಾಗ, ಖದೀಮರು ಕಬ್ಬಿಣದ ಬೀರುವನ್ನು ಮುರಿದು ಅದ ರಲ್ಲಿದ್ದ ₹10.82 ಲಕ್ಷ ಅಂದಾಜು ಮೌಲ್ಯದ 114 ಗ್ರಾಂ ಚಿನ್ನದ ಆಭರಣಗಳು, ₹20 ಸಾವಿರ ಮೌಲ್ಯದ 50 ಗ್ರಾಂ ತೂಕದ 2 ಬೆಳ್ಳಿ ಸರಗಳು ಹಾಗೂ ₹1.02 ಲಕ್ಷ ನಗದು ಹಣ ಸೇರಿದಂತೆ ಒಟ್ಟು ₹12.04 ಲಕ್ಷ ಮೌಲ್ಯದ ಸ್ವತ್ತನ್ನು ದೋಚಿದ್ದಾರೆ.
ಘಟನೆ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಖದೀಮರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.