ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕ ಎರಡು ಕಾರ್ಯಾಚರಣೆಗಳನ್ನು ನಡೆಸಿ ಬರೋಬ್ಬರಿ 3.12 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಚಿನ್ನ ಹಾಗೂ ಮಾದಕ ವಸ್ತುವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿದೇಶಗಳಿಂದ ಬೆಂಗಳೂರಿಗೆ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಈ ಕಳ್ಳಸಾಗಣೆ ಜಾಲ ಬಯಲಾಗಿದೆ.
ದುಬೈನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನೊಬ್ಬನ ನಡವಳಿಕೆಯ ಮೇಲೆ ಅನುಮಾನಗೊಂಡ ಅಧಿಕಾರಿಗಳು ಆತನನ್ನು ತಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಗುದನಾಳದಲ್ಲಿ ಅಡಗಿಸಿಟ್ಟುಕೊಂಡು ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ.
ವಶಪಡಿಸಿಕೊಂಡ ಮುದ್ದೆಮಾಲು: ಪ್ರಯಾಣಿಕನಿಂದ 4 ಕ್ಯಾಪ್ಸೂಲ್ಸ್ ರೂಪದಲ್ಲಿದ್ದ ಬರೋಬ್ಬರಿ 899.50 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಮಾರುಕಟ್ಟೆ ಮೌಲ್ಯ: ಇದರ ಒಟ್ಟು ಮೌಲ್ಯ ಸುಮಾರು 1.37 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಥೈಲ್ಯಾಂಡ್‌ನ ಬ್ಯಾಂಕಾಕ್‌ನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಮತ್ತೊಬ್ಬ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಬ್ಯಾಗೇಜ್‌ನಲ್ಲಿ ಅಕ್ರಮವಾಗಿ ಬಚ್ಚಿಟ್ಟು ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಗಾಂಜಾ (ಹೈಡ್ರೋ ಗಾಂಜಾ) ಪತ್ತೆಯಾಗಿದೆ.
ಮಾರುಕಟ್ಟೆ ಮೌಲ್ಯ: ವಶಪಡಿಸಿಕೊಳ್ಳಲಾದ ಮಾದಕ ವಸ್ತುವಿನ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 1.75 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಮಾದಕ ವಸ್ತು ಸಾಗಿಸುತ್ತಿದ್ದ ಪ್ರಯಾಣಿಕನ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ. ಇತ್ತ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದ ಆರೋಪಿಯನ್ನೂ ವಶಕ್ಕೆ ಪಡೆದು ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಇಬ್ಬರೂ ಆರೋಪಿಗಳ ಹಿನ್ನೆಲೆ ಹಾಗೂ ಈ ಜಾಲದ ಹಿಂದಿರುವ ಕಿಂಗ್‌ಪಿನ್‌ಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಲಾಗಿದೆ.