ಮಂಡ್ಯ: ಒಂಟಿ ಮಹಿಳೆಯ ಅಕ್ರಮ ಸಂಬಂಧ ಹಾಗೂ ಮದುವೆಯಾಗುವಂತೆ ಒತ್ತಾಯಿಸಿದ ಒಂದೇ ಕಾರಣಕ್ಕೆ ಆಕೆಯನ್ನು ಭೀಕರವಾಗಿ ಕೊಲೆ ಮಾಡಿ, ಶವ ಸುಟ್ಟು ಹಾಕಿದ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸಿಕ್ಕಿಬೀಳುವ ಭಯದಿಂದ ಹಂತಕ ಪ್ರಿಯಕರ ತನ್ನ ತಾಯಿಯೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ದುರಂತ ಪ್ರಕರಣ ನಡೆದಿದೆ.
ಮೃತ ದುರ್ದೈವಿಯನ್ನು ಬೆಂಗಳೂರಿನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ನಳಿನಿ ಎಂದು ಗುರುತಿಸಲಾಗಿದೆ. ಗಂಡನಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದ ನಳಿನಿಗೆ ಕೆಲ ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ರಾಜಶೇಖರ ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ದಿನಕಳೆದಂತೆ ಅಕ್ರಮ ಸಂಬಂಧಕ್ಕೆ ತಿರುಗಿದ್ದು, ಇಬ್ಬರೂ ಮಾಲ್, ಪಾರ್ಕ್ ಹಾಗೂ ಸಿನಿಮಾಗಳಿಗೆ ಜೊತೆಯಾಗಿ ಸುತ್ತಾಡುತ್ತಿದ್ದರು ಎನ್ನಲಾಗಿದೆ.
ಕಳೆದ ಒಂದು ತಿಂಗಳಿಂದ ನಳಿನಿ ತನ್ನನ್ನು ಅಧಿಕೃತವಾಗಿ ಮದುವೆಯಾಗುವಂತೆ ರಾಜಶೇಖರನಿಗೆ ಒತ್ತಾಯಿಸುತ್ತಿದ್ದಳು. ಆದರೆ ಇದಕ್ಕೆ ಒಪ್ಪದ ರಾಜಶೇಖರ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಪ್ರತಿದಿನ ಜಗಳ ತಾರಕಕ್ಕೇರುತ್ತಿತ್ತು. ಒಂದು ವೇಳೆ ಮದುವೆಯಾಗದಿದ್ದರೆ ತನಗೆ ತೊಂದರೆಯಾಗಬಹುದು ಎಂದು ಭಾವಿಸಿದ ರಾಜಶೇಖರ, ನಳಿನಿಯನ್ನು ಜೀವಂತವಾಗಿ ಮುಗಿಸಲು ಭೀಕರ ಸ್ಕೆಚ್ ಹಾಕಿದ್ದ.
ಯೋಜನೆಯಂತೆ ನಳಿನಿಯನ್ನು ನಂಬಿಸಿ ಕರೆದೊಯ್ದ ಹಂತಕ ರಾಜಶೇಖರ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಮಳವಳ್ಳಿ ತಾಲ್ಲೂಕಿನ ಜವನಹಳ್ಳಿಗುಡ್ಡದ ಬಳಿ ತಂದು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ದೇಹವನ್ನು ಸುಟ್ಟು ಕರಕಲಾಗಿಸಿದ್ದಾನೆ.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ಬೆಳಕವಾಡಿ ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬೆಚ್ಚಿಬೀಳುವ ಸತ್ಯ ಹೊರಬಂದಿದೆ. ಈ ನರರಾಕ್ಷಸ ನಳಿನಿಯ ಮೃತದೇಹ ಯಾರಿಗೂ ಅನುಮಾನ ಬಾರದಂತೆ ಕಾರಿನ ಮುಂಭಾಗದ ಸೀಟಿನಲ್ಲೇ ಕೂರಿಸಿಕೊಂಡು ಓಡಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಸುಟ್ಟು ಹೋದ ಶವದ ಸುಳಿವು ಬೆನ್ನತ್ತಿದ ಪೊಲೀಸರು ತನಿಖೆ ಚುರುಕುಗೊಳಿಸಿ ರಾಜಶೇಖರನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತನ್ನ ಕಾರನ್ನು ಮಾರಿಬಿಟ್ಟಿರುವುದಾಗಿ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಆತ ಯತ್ನಿಸಿದ್ದ. ಆದರೆ ಪೊಲೀಸರ ತನಿಖಾ ಜಾಲ ತನಗೆ ಸಮ್ಮುಖವಾಗುತ್ತಿದ್ದಂತೆ, ಸಿಕ್ಕಿಬೀಳುವ ಮರಣಭಯದಿಂದ ಜೂನ್ 28 ರಂದು ರಾಜಶೇಖರ ತನ್ನ ತಾಯಿಯೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕ್ಷಣಿಕ ಸುಖ ಹಾಗೂ ಅಕ್ರಮ ಸಂಬಂಧಗಳು ಕೊನೆಗೆ ತಂದು ನಿಲ್ಲಿಸುವ ಭೀಕರ ದುರಂತಕ್ಕೆ ಈ ರಕ್ತಸಿಕ್ತ ಕಥೆಯೇ ಸಾಕ್ಷಿಯಾಗಿದೆ. ಮಾಳವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.