Skip to main content

Police Roundup

ಗಿರಿನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: 12 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶ, ನೈಜೀರಿಯಾ ಪ್ರಜೆ ಬಂಧನ

Share News

ಬೆಂಗಳೂರು: ರಾಜಧಾನಿಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಬರೋಬ್ಬರಿ 12 ಕೋಟಿ ರೂಪಾಯಿ ಮೌಲ್ಯದ ಭಾರಿ ಪ್ರಮಾಣದ ಡ್ರಗ್ಸ್ ಜಪ್ತಿ ಮಾಡುವಲ್ಲಿ ಗಿರಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಆರೋಪಿಯನ್ನು ಬಂಧಿಸಲಾಗಿದೆ.

 

​ಬಂಧಿತ ಆರೋಪಿಯನ್ನು ನೈಜೀರಿಯಾ ಪ್ರಜೆ ಚಿಗ್ಬಂಡು ನ್ವಾಂಕಪ ಎಂದು ಗುರುತಿಸಲಾಗಿದೆ. ಬಂಧಿತನಿಂದ 5 ಕೆ.ಜಿ ತೂಕದ ಎಂಡಿಎಂಎ (MDMA) ಕ್ರಿಸ್ಟಲ್ ಹಾಗೂ 1,000 ಎಕ್ಸ್‌ಟಸಿ (Ecstasy) ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಆರೋಪಿಯು ಮೊದಲಿಗೆ ದೆಹಲಿಯಲ್ಲಿ ವಾಸವಾಗಿದ್ದು, ಅಲ್ಲಿಂದಲೇ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಸಂಗ್ರಹಿಸಿಕೊಂಡು ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ನಗರದ ಬನಶಂಕರಿ ರಿಂಗ್ ರೋಡ್ ಬಳಿ ಇರುವ ಪಿ.ಇ.ಎಸ್. ಕಾಲೇಜು ಸಮೀಪ ಸಾರ್ವಜನಿಕರಿಗೆ ಹಾಗೂ ಡ್ರಗ್ ಪೆಡ್ಲರ್‌ಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗಿರಿನಗರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

 

ಪೊಲೀಸ್ ವಿಚಾರಣೆ ವೇಳೆ ಆರೋಪಿಯು ದೆಹಲಿಯಿಂದ ತಂದಿದ್ದ ಎಂಡಿಎಂಎ ಡ್ರಗ್ಸ್ ಅನ್ನು ಸ್ಥಳೀಯ ಸಣ್ಣ ಪುಟ್ಟ ಡ್ರಗ್ ಪೆಡ್ಲರ್‌ಗಳಿಗೆ ಸರಬರಾಜು ಮಾಡುತ್ತಿದ್ದ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ. ಈ ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

 

​ಪ್ರಸ್ತುತ ಬಂಧಿತ ಆರೋಪಿಯ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin