ಚಿಕ್ಕಬಳ್ಳಾಪುರ: ಬಟ್ಟೆ ಖರೀದಿಸಲು ಪೋಷಕರೊಂದಿಗೆ ಬಂದಿದ್ದ ನಾಲ್ಕು ವರ್ಷದ ಮಗುವೊಂದು ಆಟವಾಡುತ್ತಾ ಅಂಗಡಿಯ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಬಳ್ಳಾಪುರ ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ ಹಾಗೂ ಮಧು ದಂಪತಿಯ ಪುತ್ರಿ ಗಗನ ಸಿಂಧು (೪) ಗಾಯಗೊಂಡ ಬಾಲಕಿ.
ಪೋಷಕರು ಕಾಂಪ್ಲೆಕ್ಸ್‌ನ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಸುವಲ್ಲಿ ನಿರತರಾಗಿದ್ದಾಗ, ಪೋಷಕರ ಗಮನ ತಪ್ಪಿಸಿ ಮಗು ಆಟವಾಡುತ್ತಾ ಮೊದಲ ಮಹಡಿಯ ಗ್ರಿಲ್ ಹತ್ತಿದ್ದಾಳೆ. ಈ ವೇಳೆ ಆಯತಪ್ಪಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ರಭಸಕ್ಕೆ ಮಗುವಿಗೆ ತೀವ್ರ ಪೆಟ್ಟಾಗಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಘಟನೆ ಸಂಭವಿಸುತ್ತಿದ್ದಂತೆ ತಕ್ಷಣವೇ ಮಗುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.