ನಂಜನಗೂಡು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನೊಬ್ಬನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿ, ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಂಜನಗೂಡು ತಾಲೂಕಿನ ಕಡಬೂರು ಗ್ರಾಮದಲ್ಲಿ ನಡೆದಿದೆ.
ಸುರೇಶ್ (23) ಪೊಲೀಸರ ವಶದಲ್ಲಿರುವ ಆರೋಪಿ.
ಕಡಬೂರು ಗ್ರಾಮದ ನಿವಾಸಿಯಾಗಿರುವ ಬಾಲಕಿಯ ತಂದೆ-ತಾಯಿ ಕೂಲಿ ಕೆಲಸಕ್ಕಾಗಿ ಹೊರಗೆ ಹೋಗಿದ್ದರು. ಮನೆಯಲ್ಲಿ ಬಾಲಕಿ ಒಂಟಿಯಾಗಿರುವುದನ್ನೇ ಕಾಯುತ್ತಿದ್ದ ಆರೋಪಿ ಸುರೇಶ್, ಮನೆಗೆ ಅಕ್ರಮವಾಗಿ ನುಗ್ಗಿ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.
ಆಘಾತಕ್ಕೊಳಗಾದ ಬಾಲಕಿ ಕಿರುಚಾಡಿದಾಗ, ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ಅಕ್ಕಪಕ್ಕದ ಮನೆಯವರು ಹಾಗೂ ಗ್ರಾಮಸ್ಥರು ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಆತನಿಗೆ ತಕ್ಕ ಧರ್ಮದೇಟು ನೀಡಿ, ಹುಲ್ಲಹಳ್ಳಿ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಹುಲ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.