Skip to main content

Police Roundup

ಮದುವೆಗೆ ತಿಂಗಳುಗಳಿರುವಾಗಲೇ ದಂಪತಿಯಾಗಬೇಕಿದ್ದ ಯುವಕ-ಯುವತಿ ದುರಂತ ಅಂತ್ಯ: ವಿಧಿಯಾಟಕ್ಕೆ ಇಬ್ಬರು ಬ್ಯಾಂಕ್ ಉದ್ಯೋಗಿಗಳು ಬಲಿ!

Share News

ಬಾಳಿನಲ್ಲಿ ಹೊಸ ಅಧ್ಯಾಯ ಆರಂಭಿಸಿ ಒಟ್ಟಾಗಿ ಜೀವನ ನಡೆಸಬೇಕಿದ್ದ ಯುವ ಜೋಡಿಯೊಂದು ಕೆಲವೇ ಗಂಟೆಗಳ ಅಂತರದಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘೋರ ಘಟನೆ ವರದಿಯಾಗಿದೆ. ವಿಧಿಯ ಕ್ರೂರ ಆಟಕ್ಕೆ ನಿಶ್ಚಿತಾರ್ಥವಾಗಿದ್ದ ಬ್ಯಾಂಕ್ ಉದ್ಯೋಗಿಗಳಿಬ್ಬರು ಬಲಿಯಾಗಿದ್ದು, ಕುಟುಂಬಸ್ಥರನ್ನು ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ.

 

​ಮದುವೆ ನಿಶ್ಚಯವಾಗಿದ್ದ ಜೋಡಿ:

ಕಾಸರಗೋಡಿನ ಪಳ್ಳಿಕ್ಕರ ಮೂಲದ ಪಿ. ಅನುಶ್ರೀ ಹಾಗೂ ಕಣ್ಣೂರು ಮೂಲದ ವಿ. ಅಮಲ್ ಮೃತಪಟ್ಟ ದುರ್ದೈವಿಗಳು. ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಇತ್ತೀಚೆಗಷ್ಟೇ ವಿಜೃಂಭಣೆಯಿಂದ ನಿಶ್ಚಿತಾರ್ಥ ನೆರವೇರಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಬರುವ ಡಿಸೆಂಬರ್ 26ರಂದು ಇವರಿಬ್ಬರು ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು.

 

​ಮೈಸೂರು ಮತ್ತು ಕೊಚ್ಚಿಯಲ್ಲಿ ಶವವಾಗಿ ಪತ್ತೆ:

ಅನುಶ್ರೀ ಅವರು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಎಸ್‌ಬಿಐ (SBI) ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ ಅನುಶ್ರೀ ಅವರ ಕುಟುಂಬಸ್ಥರು ಫೋನ್ ಮಾಡಿದಾಗ ಯಾವುದೇ ಕರೆ ಸ್ವೀಕರಿಸದಿದ್ದಾಗ, ಅನುಮಾನಗೊಂಡು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ನೆರೆಹೊರೆಯವರು ಮನೆಗೆ ತೆರಳಿ ನೋಡಿದಾಗ ಅನುಶ್ರೀ ಅವರು ಶವವಾಗಿ ಪತ್ತೆಯಾಗಿದ್ದಾರೆ.

 

​ಈ ಆಘಾತಕಾರಿ ಘಟನೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ, ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿ. ಅಮಲ್ ಸಹ ಕೇರಳದ ಕೊಚ್ಚಿಯ ಎರ್ನಾಕುಲಂ ನಾರ್ತ್ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

 

​ತನಿಖೆ ಚುರುಕುಗೊಳಿಸಿದ ಪೊಲೀಸರು:

ಹುಣಸೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಅನುಶ್ರೀ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇಬ್ಬರ ದಿಢೀರ್ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಭಿನ್ನ ಕೋನಗಳಲ್ಲಿ ತೀವ್ರ ತನಿಖೆ ಮುಂದುವರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin