Skip to main content

Police Roundup

KPSC ಅಕ್ರಮ ನೇಮಕಾತಿ ಪ್ರಕರಣ: ಇತಿಹಾಸದಲ್ಲೇ ಮೊದಲ ಬಾರಿಗೆ 21 ಸ್ಥಳಗಳ ಮೇಲೆ ಇಡಿ ಮೆಗಾ ರೇಡ್!

Share News

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆದಿದೆ ಎನ್ನಲಾದ ಬೃಹತ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, KPSC ಇತಿಹಾಸದಲ್ಲೇ ಮೊದಲ ಬಾರಿಗೆ ಇಡಿ ಅಧಿಕಾರಿಗಳು ರಾಜ್ಯಾದ್ಯಂತ ಮೆಗಾ ರೇಡ್ ನಡೆಸಿದ್ದಾರೆ.

 

ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿ ಕೇಂದ್ರ ಕಚೇರಿ, ಅಮಾನತುಗೊಂಡಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸ, ಹಾಲಿ ಸದಸ್ಯೆ ಶಾಂತಾ ಹೊಸಮನಿ, ಮಧ್ಯವರ್ತಿಗಳು, ಪತ್ರಿಕೆ ಡಿಜಿಟಲ್ ಮೌಲ್ಯಮಾಪನ ಸಂಸ್ಥೆಯಾದ M/s ಎಡುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಹಾಗೂ ಆಯ್ಕೆಯಾದ ಕೆಲ ಅಭ್ಯರ್ಥಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

 

ರಾಜ್ಯದ ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಹಾಗೂ ಗುಜರಾತ್‌ನ ಅಹಮದಾಬಾದ್ ಸೇರಿದಂತೆ ಒಟ್ಟು 21 ಸ್ಥಳಗಳಲ್ಲಿ ಇಡಿ ಅಧಿಕಾರಿಗಳ ಪ್ರತ್ಯೇಕ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡುತ್ತಿವೆ.

 

ಪ್ರಕರಣದ ಹಿನ್ನೆಲೆ ಹಾಗೂ ಗಂಭೀರ ಆರೋಪಗಳು:

* ಪ್ರತ್ಯೇಕ FIR ದಾಖಲು: ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 4 ಪ್ರತ್ಯೇಕ ಎಫ್‌ಐಆರ್‌ಗಳು (FIR) ದಾಖಲಾಗಿದ್ದವು.

 

* ₹70 ರಿಂದ ₹80 ಲಕ್ಷ ಲಂಚ: ಪಶುವೈದ್ಯಾಧಿಕಾರಿ (Veterinary Officers) ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ, ಆಯ್ಕೆ ಮಾಡಲು ಪ್ರತಿಯೊಬ್ಬ ಅಭ್ಯರ್ಥಿಯಿಂದ ಮಧ್ಯವರ್ತಿಗಳು ಬರೋಬ್ಬರಿ 70 ರಿಂದ 80 ಲಕ್ಷ ರೂಪಾಯಿ ಲಂಚ ಪಡೆದಿರುವ ಗಂಭೀರ ಆರೋಪವಿದೆ.

 

* ಉತ್ತರ ಪತ್ರಿಕೆ ತಿದ್ದುಪಡಿ: ಪರೀಕ್ಷೆಯ ಉತ್ತರ ಪತ್ರಿಕೆ ತಿದ್ದುಪಡಿ, OMR ಶೀಟ್ ದುರ್ಬಳಕೆ ಹಾಗೂ KPSC ಅಧಿಕಾರಿಗಳ ಸಂಬಂಧಿಕರಿಗೆ ನಿಯಮಬಾಹಿರವಾಗಿ ಅಕ್ರಮವಾಗಿ ಹುದ್ದೆ ಕೊಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಈ ಬೃಹತ್ ಹಗರಣದಲ್ಲಿ ನೂರಾರು ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿರುವ ಬಲವಾದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, PMLA ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin