ರಾಣೇಬೆನ್ನೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳನ್ನು ಉಲ್ಲಂಘಿಸಿ, ಸೂಕ್ತವಾಗಿ ಪ್ಯಾಕ್ ಮಾಡದೆ ಸಾಗಿಸುತ್ತಿದ್ದ ಒಟ್ಟು ೧,೦೩೩ ಕೆ.ಜಿ. ಕೋಳಿ ಮಾಂಸವನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆದೇಶದಂತೆ, ಹಾವೇರಿ ಜಿಲ್ಲಾ ಅಂಕಿತಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಧಿಕಾರಿಗಳು ರಾಣೇಬೆನ್ನೂರು ತಹಶೀಲ್ದಾರರೊಂದಿಗೆ ಆಯೋಜಿಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಆ.೧೩ರಂದು ತಾಲೂಕಿನ ವಿವಿಧ ಮಾಂಸ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಿ ಈ ಪರಿಶೀಲನೆ ನಡೆಸಿದ್ದಾರೆ.
ವೆಂಕಟೇಶ್ವರ ಹ್ಯಾಚರೀಸ್ನಲ್ಲಿ ೩೮೨ ಕೆ.ಜಿ. ಮಾಂಸ ಜಪ್ತಿ:
ತಾಲೂಕಿನ ಕೃಷ್ಣಾಪುರ ಮತ್ತು ತರೇದಹಳ್ಳಿ ಗ್ರಾಮದ ‘ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್’ ಘಟಕದಲ್ಲಿ ಪರಿಶೀಲಿಸಿದಾಗ, ಸಾರ್ವಜನಿಕ ಪೂರೈಕೆಗಾಗಿ ಸಿದ್ಧಪಡಿಸಿದ್ದ ಮಾಂಸವನ್ನು ಪ್ಯಾಕ್ ಮಾಡದೇ ಅಸಂಘಟಿತವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿ ಪತ್ತೆಯಾದ ೨೦೦ ಕೆ.ಜಿ. ಚಿಕನ್ ಹೋಲ್, ೧೪೨ ಕೆ.ಜಿ. ಸ್ಕಿನ್ಲೆಸ್ ಚಿಕನ್ ಹಾಗೂ ೪೦ ಕೆ.ಜಿ. ಚಿಕನ್ ಲೆಗ್ಸ್ ಸೇರಿ ಒಟ್ಟು ೩೮೨ ಕೆ.ಜಿ. ಮಾಂಸವನ್ನು ಜಪ್ತಿ ಮಾಡಿ, ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ವೆಸ್ಟ್ವಿಂಡ್ ಘಟಕದಲ್ಲಿ ೬೫೧ ಕೆ.ಜಿ. ಸೀಜ್:
ಅದೇ ರೀತಿ ಹನುಮನಹಳ್ಳಿ ಗ್ರಾಮದ ‘ವೆಸ್ಟ್ವಿಂಡ್ ಫುಡ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್’ ಘಟಕದ ಮೇಲೆಯೂ ದಾಳಿ ನಡೆಸಿದ ಅಧಿಕಾರಿಗಳು, ೨೨೨ ಕೆ.ಜಿ. ಬೋನ್ ಪೀಸಸ್, ೧೦೦ ಕೆ.ಜಿ. ಚಿಕನ್ ಹೋಲ್, ೧೨೬ ಕೆ.ಜಿ. ಸ್ಕಿನ್ಲೆಸ್, ೧೦೦ ಕೆ.ಜಿ. ವಿಂಗ್ಸ್ ಹಾಗೂ ೧೦೩ ಕೆ.ಜಿ. ಬೋನ್ಲೆಸ್ ಸೇರಿ ಒಟ್ಟು ೬೫೧ ಕೆ.ಜಿ. ಕೋಳಿ ಮಾಂಸವನ್ನು ಪತ್ತೆ ಹಚ್ಚಿದ್ದಾರೆ. ಕೆಲವು ಬಾಕ್ಸ್ಗಳನ್ನು ನಿಯಮಾನುಸಾರ ಪ್ಯಾಕ್ ಮಾಡದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಸಂಪೂರ್ಣ ಮಾಂಸವನ್ನು ಜಪ್ತಿ ಮಾಡಿ ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಲಾಗಿದೆ.
ಎರಡೂ ಘಟಕಗಳ ವಿರುದ್ಧ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-೨೦೦೬’ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಉದ್ದಿಮೆದಾರರು ನೀಡುವ ವಿವರಣೆಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಾವೇರಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿಗಳು ತಿಳಿಸಿದ್ದಾರೆ.