ಚಿಕ್ಕಬಳ್ಳಾಪುರ: ಜಮೀನಿನ ಖಾತೆ ಮಾಡಿಕೊಡಲು ಬೃಹತ್ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಂಗಮಕೋಟೆ ನಾಡಕಚೇರಿಯ ಸೆಕ್ರೆಟರಿ ಮೋಹನ್ ಕುಮಾರ್ ಎಂಬುವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿ ಸೆಕ್ರೆಟರಿ ಮೋಹನ್ ಕುಮಾರ್, ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ರೈತ ಬೈರೇಗೌಡ ಎಂಬುವವರಿಂದ ಒಟ್ಟು 7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಕೆಲಸ ಆರಂಭಿಸಲು 3 ಲಕ್ಷ ರೂಪಾಯಿ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಈ ಕುರಿತು ಸಂತ್ರಸ್ತ ರೈತ ಬೈರೇಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.