Skip to main content

Police Roundup

ನೈಸ್ ರಸ್ತೆ ಟೋಲ್ ಗೊಂದಲ: ಕೋರ್ಟ್ ಆದೇಶದ ಹೆಸರಲ್ಲಿ ಸುಳ್ಳು ಸುದ್ದಿ ಆರೋಪ, ಪೊಲೀಸ್ ಆಯುಕ್ತರಿಗೆ ದೂರು

Share News

ಬೆಂಗಳೂರು: ಬೆಂಗಳೂರು ಹೊರವರ್ತುಲ ನೈಸ್ (NICE) ರಸ್ತೆಯ ಟೋಲ್ ಸಂಗ್ರಹ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಂತಹ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

 

​ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕೆಲವು ನಾಯಕರು ಹಾಗೂ ‘Nothing NICE’ ವೆಬ್‌ಸೈಟ್ ಮೂಲಕ ಹೈಕೋರ್ಟ್ ಆದೇಶದ ನೆಪವೊಡ್ಡಿ ಸಾರ್ವಜನಿಕರನ್ನು ತಪ್ಪುದಾರಿಗೆಳೆಯಲಾಗುತ್ತಿದೆ ಎಂದು ಆರೋಪಿಸಿ ಕುಶಾಲ್ ಹರುವೇಗೌಡ ಎಂಬುವರು ಈ ದೂರು ನೀಡಿದ್ದಾರೆ. ನ್ಯಾಯಾಲಯದ ಹೆಸರಿನಲ್ಲಿ ಹರಡುತ್ತಿರುವ ಈ ಗೊಂದಲದಿಂದ ಪ್ರತಿದಿನ ನೈಸ್ ರಸ್ತೆಯಲ್ಲಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿ ನಡುವೆ ಜಟಾಪಟಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ.

 

​ದೂರಿನ ಪ್ರಮುಖ ಅಂಶಗಳು ಹಾಗೂ ಆಗ್ರಹಗಳು:

​ನ್ಯಾಯಾಲಯದ ಆದೇಶ ಸ್ಪಷ್ಟಪಡಿಸಿ: ನೈಸ್ ರಸ್ತೆಯಲ್ಲಿ ಟೋಲ್ ಪಾವತಿಸಬಾರದು ಎಂದು ಹೈಕೋರ್ಟ್‌ನಿಂದ ಯಾವುದೇ ಸ್ಪಷ್ಟ ಆದೇಶವಿದೆಯೇ ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ತನಿಖೆ ನಡೆಸಿ, ಸಾರ್ವಜನಿಕರಿಗೆ ಸತ್ಯಾಸತ್ಯತೆ ತಿಳಿಸಬೇಕು.

 

​ತಪ್ಪುದಾರಿಗೆಳೆಯುವವರ ವಿರುದ್ಧ ಕ್ರಮ: ಅಂತಹ ಯಾವುದೇ ಆದೇಶ ಇಲ್ಲದಿದ್ದಲ್ಲಿ, ನ್ಯಾಯಾಲಯದ ಹೆಸರು ದುರ್ಬಳಕೆ ಮಾಡಿಕೊಂಡು ‘Nothing NICE’ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

 

​ಸಂಘರ್ಷಕ್ಕೆ ತಡೆ: ಟೋಲ್ ಪ್ಲಾಜಾಗಳಲ್ಲಿ ಸಾರ್ವಜನಿಕರು ಮತ್ತು ಸಿಬ್ಬಂದಿ ನಡುವೆ ಸಂಘರ್ಷ ಉಂಟಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

 

​ಸಾಮಾನ್ಯ ಸಂಚಾರಕ್ಕೆ ಅಡಚಣೆ ನೀಡದಿರಿ: ಸಾವಿರಾರು ಸವಾರರು ಬಳಸುವ ಪ್ರಮುಖ ಸಂಪರ್ಕ ರಸ್ತೆಯಲ್ಲಿ ರಾಜಕೀಯ ಚಟುವಟಿಕೆಗಳು ಅಥವಾ ಅಭಿಯಾನಗಳ ನೆಪದಲ್ಲಿ ಸಾಮಾನ್ಯ ನಾಗರಿಕರ ಸುಗಮ ಸಂಚಾರ ಮತ್ತು ಭದ್ರತೆಗೆ ಧಕ್ಕೆಯಾಗಬಾರದು.

 

​”ನ್ಯಾಯಾಲಯದ ಆದೇಶ ಇದ್ದರೆ ಅದನ್ನು ಎಲ್ಲರೂ ಗೌರವಿಸಿ ಪಾಲಿಸೋಣ. ಆದರೆ ಕೋರ್ಟ್ ಹೆಸರಿನಲ್ಲಿ ನಾಗರಿಕರನ್ನು ಗೊಂದಲಕ್ಕೆ ತಳ್ಳುವುದು ನಿಲ್ಲಬೇಕು,” ಎಂದು ದೂರುದಾರರು ಒತ್ತಾಯಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin