ಆನೇಕಲ್ : ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು, ವೈಭವದ ಜೀವನ ಹಾಗೂ ಶೋಕಿಗಾಗಿ ಸರಣಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಒಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಆನೇಕಲ್ ತಾಲೂಕಿನ ಗೆರಟಿಗನಬೆಲೆ ನಿವಾಸಿ ಜೀವನ್ ಕುಮಾರ್ ಬಂಧಿತ ಆರೋಪಿ. ಈತ ಸಿಡಿಹೊಸಕೋಟೆ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಖದೀಮನ ಖತರ್ನಾಕ್ ಕೃತ್ಯ:
ಆರೋಪಿ ಜೀವನ್ ಕುಮಾರ್ ತನ್ನ ಐಷಾರಾಮಿ ಮಹೀಂದ್ರಾ ಥಾರ್ ಕಾರಿನಲ್ಲಿ ಬಂದು ಒಂಟಿ ಮಹಿಳೆಯರು ಹಾಗೂ ವೃದ್ಧೆಯರನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ. ವಿಳಾಸ ಕೇಳುವ ನೆಪದಲ್ಲಿ ಅಥವಾ ಮೊಬೈಲ್ ನೀಡಿ ಮಾತನಾಡುವಂತೆ ಹೇಳಿ, ಗಮನ ಬೇರೆಡೆ ಸೆಳೆದು ಸಡನ್ ಆಗಿ ಚಿನ್ನದ ಸರ ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗುತ್ತಿದ್ದ.
ಇತ್ತೀಚೆಗೆ ತಮಿಳುನಾಡಿನ ತಳಿ, ಹೊಸೂರು ಹಾಗೂ ಮತ್ತಿಗಿರಿ ಭಾಗಗಳಲ್ಲಿ ಕೇವಲ 2 ದಿನಗಳಲ್ಲಿ 4 ಮಹಿಳೆಯರಿಂದ ಚಿನ್ನಾಭರಣ ಕಳವು ಮಾಡಿ ಸರಣಿ ಚೈನ್ ಸ್ನ್ಯಾಚಿಂಗ್ ನಡೆಸಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ತಳಿ ಪೊಲೀಸರು, ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ₹10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಥಾರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.