Skip to main content

Police Roundup

ಕ್ವಾರಿ ಅಕ್ರಮಕ್ಕೆ ಕಡಿವಾಣವೋ… ದಂಡದ ಬಿಸಿ ಕ್ವಾರಿ ಮಾಲೀಕರಿಗೋ?

Share News

ಹಾವೇರಿ: ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ 46 ಕಲ್ಲು ಕ್ವಾರಿ ಹಾಗೂ ಕ್ರಷರ್ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಟ್ಟು ₹26.32 ಕೋಟಿ ದಂಡ ವಿಧಿಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

 

​ವಿಶೇಷವೆಂದರೆ, ಈ ದಂಡದ ಪಟ್ಟಿಯಲ್ಲಿ ಸಕ್ಕರೆ ಮತ್ತು ಜವಳಿ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಬಳಿಯ ಕ್ವಾರಿಯೂ ಸೇರಿದ್ದು, ಅವರಿಗೆ ಅಂದಾಜು ₹3 ಕೋಟಿ ದಂಡ ವಿಧಿಸಲಾಗಿದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.

 

​ಡ್ರೋನ್ ಸಮೀಕ್ಷೆಯಿಂದ ಬಯಲಾಯ್ತು ಉಲ್ಲಂಘನೆ:

ಕ್ವಾರಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಲು ‘ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್’ (KSRSAC) ನೆರವಿನಿಂದ 2022ರಿಂದ 2024ರ ಅವಧಿಯಲ್ಲಿ ಜಿಲ್ಲೆಯ 68 ಕ್ವಾರಿ-ಕ್ರಷರ್ ಸ್ಥಳಗಳಲ್ಲಿ ಡ್ರೋನ್ ಸಮೀಕ್ಷೆ ನಡೆಸಲಾಗಿತ್ತು. ಡ್ರೋನ್ ಛಾಯಾಚಿತ್ರಗಳು ಮತ್ತು ಕಲ್ಲು ತೆಗೆದಿರುವ ಪ್ರಮಾಣವನ್ನು ಇಲಾಖೆಯ ಅಧಿಕೃತ ದಾಖಲೆಗಳೊಂದಿಗೆ ಹೋಲಿಸಿ ಪರಿಶೀಲಿಸಿದಾಗ 46 ಗುತ್ತಿಗೆದಾರರು ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

​ದಂಡದ ಲೆಕ್ಕಾಚಾರ ಹೀಗಿದೆ:

​ಪರವಾನಗಿ ಪಡೆದ ಪ್ರದೇಶದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಕಲ್ಲು ತೆಗೆದಿದ್ದರೆ ಟನ್‌ಗೆ ₹70 ದಂಡ.

 

​ಪರವಾನಗಿ ಗಡಿ ಮೀರಿ ಅಕ್ಕಪಕ್ಕದ ಜಾಗ ಒತ್ತುವರಿ ಮಾಡಿ ಕಲ್ಲು ತೆಗೆದಿದ್ದರೆ ಟನ್‌ಗೆ ₹140 ದಂಡ.

 

​ದಂಡ ಪಾವತಿಸಲು 6 ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮೂರು ಕಂತುಗಳಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

 

​ಪ್ರಭಾವಿಗಳಿಗೂ ದಂಡದ ಬಿಸಿ:

ಸಚಿವರಷ್ಟೇ ಅಲ್ಲದೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಪುತ್ರ ಪುಲಿಕೇಶಿ ಹಾಗೂ ಸಹೋದರ ಪರಮೇಶ್ವರಪ್ಪ ಶಿವಣ್ಣನವರ ಒಡೆತನದ ಕ್ವಾರಿಗಳಿಗೂ ದಂಡ ವಿಧಿಸಲಾಗಿದೆ. ಅಲ್ಲದೆ ಕಜ್ಜರಿ ಗ್ರಾಮದ ಕ್ವಾರಿ ಮಾಲೀಕ ನಾಗರಾಜ ಆನ್ವೇರಿ ಅವರಿಗೂ ಸುಮಾರು ₹1 ಕೋಟಿ ದಂಡದ ನೋಟಿಸ್ ಜಾರಿಯಾಗಿದೆ.

 

​”ನಾವು ಪರವಾನಗಿ ನಿಯಮಗಳಂತೆಯೇ ಕ್ವಾರಿ ನಡೆಸುತ್ತಿದ್ದರೂ ಏಕಾಏಕಿ ಕೋಟ್ಯಂತರ ರೂಪಾಯಿ ದಂಡ ವಿಧಿಸಿರುವುದು ಸಂಪೂರ್ಣ ಅವೈಜ್ಞಾನಿಕ. ಈ ಕ್ರಮವನ್ನು ಖಂಡಿಸಿ ಸೆಪ್ಟೆಂಬರ್ 18ರಿಂದ ಜಿಲ್ಲೆಯ ಎಲ್ಲಾ ಕಲ್ಲು ಕ್ವಾರಿ ಹಾಗೂ ಕ್ರಷರ್‌ಗಳ ಕಾರ್ಯಾಚರಣೆ ಮತ್ತು ಉತ್ಪಾದನೆ ಸ್ಥಗಿತಗೊಳಿಸಿ ಹೋರಾಟ ನಡೆಸಲಿದ್ದೇವೆ.”

 

— ಬಸವರಾಜ ಭ. ಬೆಳವಡಿ, ಅಧ್ಯಕ್ಷರು, ಹಾವೇರಿ ಜಿಲ್ಲಾ ಕ್ರಷರ್ಸ್ ಹಾಗೂ ಕ್ವಾರಿ ಓನರ್ಸ್ ಅಸೋಸಿಯೇಷನ್

​”68 ಸ್ಥಳಗಳಲ್ಲಿ ನಡೆಸಿದ ಡ್ರೋನ್ ಸಮೀಕ್ಷೆ ಹಾಗೂ ಇಲಾಖೆಯ ದಾಖಲೆಗಳ ಸುದೀರ್ಘ ಪರಿಶೀಲನೆ ಬಳಿಕ ನಿಯಮ ಉಲ್ಲಂಘಿಸಿದ 46 ಗುತ್ತಿಗೆದಾರರಿಗೆ ₹26.32 ಕೋಟಿ ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ ಕಾನೂನುಬದ್ಧ ಮುಂದಿನ ಕ್ರಮ ಜರುಗಿಸಲಾಗುವುದು.”

— ಟಿ.ವಿ. ಪುಷ್ಪಾ, ಹಿರಿಯ ಭೂ ವಿಜ್ಞಾನಿ

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin