ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಮೊದಲ ಕಠಿಣ ಕ್ರಮ ಜರುಗಿಸಿದೆ. ಕರ್ತವ್ಯಲೋಪ ಎಸಗಿದ ಆರೋಪದ ಮೇರೆಗೆ ಸರ್ಕಲ್-1ರ ಸಹಾಯಕ ಔಷಧ ನಿಯಂತ್ರಕ (ADC) ಓಂಕಾರೇಶ್ವರ್ ಅವರನ್ನು ಸರ್ಕಾರ ಅಮಾನತು (ಸಸ್ಪೆಂಡ್) ಮಾಡಿ ಆದೇಶಿಸಿದೆ.
ಪ್ರಕರಣದ ವಿವರ:
ಚಾಮರಾಜ್ಪೇಟೆಯ ‘ಕೃಪಾ ಹೆಲ್ತ್ ಕೇರ್’ ಸಂಸ್ಥೆಯಲ್ಲಿ ನಕಲಿ ಔಷಧ ಮಾರಾಟ ಜಾಲ ಬೆಳಕಿಗೆ ಬಂದಿತ್ತು. ಈ ಅಕ್ರಮದ ವಿರುದ್ಧ ನಿಯಮಾನುಸಾರ ಸೂಕ್ತ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳುವಲ್ಲಿ ಓಂಕಾರೇಶ್ವರ್ ಅವರು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ನಕಲಿ ಔಷಧ ಜಾಲದ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಕರ್ತವ್ಯಲೋಪ ಎಸಗಿದ ಅಧಿಕಾರಿಗೆ ಸರ್ಕಾರ ಈ ಮೂಲಕ ಶಾಕ್ ನೀಡಿದೆ.
ನಕಲಿ ಔಷಧ ಜಾಲದ ಜಾಲವನ್ನು ಬುಡಸಮೇತ ಕಿತ್ತೊಗೆಯಲು ತನಿಖೆ ಚುರುಕುಗೊಂಡಿದ್ದು, ಈ ಪ್ರಕರಣದಲ್ಲಿ ಸಸ್ಪೆಂಡ್ ಆದ ಮೊದಲ ಉನ್ನತ ಅಧಿಕಾರಿ ಓಂಕಾರೇಶ್ವರ್ ಅವರಾಗಿದ್ದಾರೆ. ಈ ಕ್ರಮವು ಇಲಾಖೆಯ ಇತರ ಅಧಿಕಾರಿಗಳಿಗೂ ಮುನ್ನೆಚ್ಚರಿಕೆಯ ಸಂದೇಶವಾಗಿದೆ.