Skip to main content

Police Roundup

ನಂಜನಗೂಡು: ಬೆಳೆ ಕಾಯಲು ತೆರಳಿದ್ದ ರೈತ ಕಾಡಾನೆ ದಾಳಿಗೆ ಬಲಿ; ಗ್ರಾಮಸ್ಥರ ತೀವ್ರ ಆಕ್ರೋಶ

Share News

ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿ ಬೆಳಿಗ್ಗೆ ಮನೆಗೆ ವಾಪಸ್ ಬರುತಿದ್ದ ರೈತರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ, ಅವರನ್ನು ಬಲಿ ಪಡೆದಿರುವ ದಾರುಣ ಘಟನೆ ನಂಜನಗೂಡು ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ಜರುಗಿದೆ.

 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಹಂಚೀಪುರ ಗ್ರಾಮದ ನಿವಾಸಿ ಶಿವಕುಮಾರ್ (60) ಮೃತ ದುರ್ದೈವಿ.

 

ಘಟನೆಯ ವಿವರ:

ಮೃತ ಶಿವಕುಮಾರ್ ಅವರು ರಾತ್ರಿ ತಮ್ಮ ಜಮೀನಿಗೆ ಬೆಳೆ ಕಾವಲು ಕಾಯಲು ತೆರಳಿದ್ದರು. ಬಳಿಕ ಬೆಳಿಗ್ಗೆ ಸುಮಾರು 5.30ರ ವೇಳೆಗೆ ಗ್ರಾಮಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಎದುರಾದ ಕಾಡಾನೆ ದಾಳಿ ನಡೆಸಿದೆ. ಆನೆಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ಗ್ರಾಮಸ್ಥರ ಆಕ್ರೋಶ ಮತ್ತು ಭೀತಿ:

ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಕಾಡುಪ್ರಾಣಿಗಳ ದಾಳಿಗಳು ನಡೆಯುತ್ತಿದ್ದು, ಜೀವಭಯದ ನಡುವೆಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

 

ಬೆಳೆಗಳನ್ನು ರಕ್ಷಿಸಿಕೊಳ್ಳಲು ಜಮೀನಿಗೆ ಕಾವಲು ಕಾಯಲು ಹೋಗುವ ರೈತರು ಪ್ರತಿನಿತ್ಯ ತಮ್ಮ ಪ್ರಾಣವನ್ನೇ ಅಪಾಯಕ್ಕೆ ಒಡ್ಡಬೇಕಾದ ಶೋಚನೀಯ ಸ್ಥಿತಿಯಿದೆ. ಜಮೀನಿಗೆ ತೆರಳುವುದಕ್ಕೂ ಹಾಗೂ ವಾಪಸ್ ಬರುವುದಕ್ಕೂ ರೈತರಲ್ಲಿ ತೀವ್ರ ಆತಂಕ ಕಾಡುತ್ತಿದ್ದು, ರೈತ ಶಿವಕುಮಾರ್ ಅವರ ಈ ಅಕಾಲಿಕ ಸಾವು ಅರಣ್ಯದಂಚಿನ ಗ್ರಾಮಗಳಲ್ಲಿ ಜನರ ಸುರಕ್ಷತೆಯ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಬೆಳೆ ರಕ್ಷಣೆಯ ಜೊತೆಗೆ ರೈತರ ಜೀವ ರಕ್ಷಣೆಗೂ ಕೂಡಲೇ ಸೂಕ್ತ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin