ಆನೇಕಲ್: ಬೆಂಗಳೂರು ಹೊರವಲಯದ ಐತಿಹಾಸಿಕ ಆನೇಕಲ್ ಪಟ್ಟಣದಲ್ಲಿ ದಸರಾ ಹಬ್ಬದ ಸಂಭ್ರಮದ ದಿನವೇ ಭೀಕರ ಹತ್ಯೆಯೊಂದು ನಡೆದಿದೆ. ದಸರಾ ಅಂಬಾರಿ ಉತ್ಸವ ಕಣ್ತುಂಬಿಕೊಳ್ಳಲು ಬಂದಿದ್ದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಸಾರಕ್ಕಪಲ್ಲಿ ಗ್ರಾಮದ ಮೂಲದ ಯಲ್ಲಪ್ಪ (56) ಕೊಲೆಯಾದ ದುರ್ದೈವಿ. ಕಳೆದ 18 ವರ್ಷಗಳಿಂದ ಆನೇಕಲ್‌ನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಟ್ನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಯಲ್ಲಪ್ಪ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಘಟನೆಯ ವಿವರ:
ದಸರಾ ಹಬ್ಬದ ಅಂಗವಾಗಿ ಆನೇಕಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಬೂ ಸವಾರಿ ಹಾಗೂ ಅಂಬಾರಿ ಉತ್ಸವವನ್ನು ವೀಕ್ಷಿಸಲು ಯಲ್ಲಪ್ಪ ಪಟ್ಟಣಕ್ಕೆ ಆಗಮಿಸಿದ್ದರು. ಸಂಜೆ ವೇಳೆಗೆ ತಮ್ಮ ಪತ್ನಿ ಕಾಂತಮ್ಮ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ತಾನು ಅಂಬಾರಿ ನೋಡಲು ಬಂದಿರುವುದಾಗಿ ತಿಳಿಸಿದ್ದರು.
ಆದರೆ, ರಾತ್ರಿ ವೇಳೆ ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂ ಬಳಿ ಮದ್ಯ ಸೇವಿಸಲು ತೆರಳಿದ್ದ ವೇಳೆ ದುಷ್ಕರ್ಮಿಗಳೊಂದಿಗೆ ಯಾವುದೋ ವಿಚಾರವಾಗಿ ಗಲಾಟೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿಗಳು ಯಲ್ಲಪ್ಪ ಅವರ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸ್ ತನಿಖೆ ಚುರುಕು:
ಮುಂಜಾನೆ ಚಿಕ್ಕಕೆರೆ ಸ್ಟೇಡಿಯಂ ಬಳಿ ಯಲ್ಲಪ್ಪ ಅವರ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಆನೇಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆನೇಕಲ್ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಕಂತುಗಡುಕರ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ.