ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಐವರು ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಹಲವರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಮೂಲಕ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಹೊಸ ವರ್ಗಾವಣೆಗಳ ಜೊತೆಗೆ ಹಿಂದಿನ ಕೆಲವು ಆದೇಶಗಳನ್ನು ಮಾರ್ಪಡಿಸಲಾಗಿದೆ.
ಅಧಿಕಾರಿಗಳ ವಿವರ ಹಾಗೂ ನಿಯೋಜಿತ ಹುದ್ದೆಗಳು:
ಡಾ. ರವಿಶಂಕರ್ ಜೆ: ಇವರನ್ನು ಬೆಂಗಳೂರು ವಿಭಾಗದ ಅಬಕಾರಿ ಆಯುಕ್ತರಾಗಿ ನೇಮಕ ಮಾಡಲಾಗಿದೆ. ವೆಂಕಟೇಶ್ ಕುಮಾರ್ ಆರ್. ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಇವರನ್ನು ನಿಯೋಜಿಸಲಾಗಿದೆ.
ಇಬ್ರಾಹಿಂ ಮೈಗೂರ್: ಹುಬ್ಬಳ್ಳಿಯ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಇವರಿಗೆ ಬೆಳಗಾವಿಯ ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶನಾಲಯದ ‘ವಿಶೇಷ ಅಧಿಕಾರಿ’ಯಾಗಿ ಹೆಚ್ಚುವರಿ ಪ್ರಭಾರ ನೀಡಲಾಗಿದೆ.
ಲತಾ ಆರ್: ಇವರನ್ನು ಡಿಪಿಎಆರ್ಗೆ (DPAR) ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಇವರನ್ನು ಕರ್ನಾಟಕ ಗೃಹ ಮಂಡಳಿಗೆ ವರ್ಗಾಯಿಸಿ ಹೊರಡಿಸಲಾಗಿದ್ದ ಹಿಂದಿನ ಆದೇಶವನ್ನು ಹಿಂಪಡೆಯಲಾಗಿದೆ.
ಗುರುದತ್ತ ಹೆಗಡೆ: ಇವರಿಗೆ ಪ್ರಸ್ತುತ ಹುದ್ದೆಯ ಜೊತೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿಯ ಒಂಬುಡ್ಸ್ಮನ್ ಆಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
ಗೋವಿಂದ ರೆಡ್ಡಿ: ಬೆಳಗಾವಿಯ ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಗಾರಿಕೆಯಲ್ಲಿ ಮುಂದಿನ ಆದೇಶದವರೆಗೆ ಮುಂದುವರಿಯಲಿದ್ದಾರೆ.