ಗದಗ: ಬಡ್ಡಿ ದಂಧೆಕೋರರ ನಿರಂತರ ಕಿರುಕುಳ ಹಾಗೂ ಬೆದರಿಕೆಗೆ ಮನನೊಂದು ವ್ಯಕ್ತಿಯೊಬ್ಬರು ಸೆಲ್ಫಿ ವಿಡಿಯೋ ಹಾಗೂ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಗದಗ ನಗರದಲ್ಲಿ ನಡೆದಿದೆ.
ನಗರದ ಕರೆಮ್ಮಕಲ್ ಬಡಾವಣೆಯ ನಿವಾಸಿ ಸಂಪತ್ ದಂಡಗಿ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವರು ಸಂಪತ್ ಅವರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನಿರಂತರ ಒತ್ತಡ: ಧರ್ಮಗೌಡ ಕರಿಯನಗೌಡ್ರ ಎಂಬಾತ ಹಣ ಮತ್ತು ಬಡ್ಡಿ ವಸೂಲಿಗಾಗಿ ಸಂಪತ್ ಹಾಗೂ ಅವರ ಪತ್ನಿಗೂ ಕರೆ ಮಾಡಿ ನಿರಂತರವಾಗಿ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.
ಚೆಕ್ ಬೌನ್ಸ್ ಬೆದರಿಕೆ: ಧರ್ಮಗೌಡ ಕರಿಯನಗೌಡ್ರ ಹಾಗೂ ರವಿ ಶಿವನಗುತ್ತಿ ಎಂಬುವರು, ಸಂಪತ್ ದಂಪತಿಯ ಹೆಸರಿನ ಚೆಕ್‌ಗಳನ್ನು ಇಟ್ಟುಕೊಂಡು ‘ಚೆಕ್ ಬೌನ್ಸ್’ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು ಎಂದು ಕುಟುಂಬದವರು ದೂರಿದ್ದಾರೆ.
ಆತ್ಮಹತ್ಯೆಗೆ ಮುನ್ನ ಸಂಪತ್ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ. “ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣಕಾಸಿನ ವ್ಯವಹಾರ ನಡೆಸಿದ್ದೆ. ಆದರೆ ತಮಗೆ ಸಂಕಷ್ಟ ಎದುರಾದಾಗ ಯಾರೂ ನೆರವಾಗಲಿಲ್ಲ. ದುಡಿಯುತ್ತಾ ನೆಮ್ಮದಿಯಾಗಿ ಬದುಕಬೇಕೆಂಬ ಆಸೆಯಿತ್ತು, ಆದರೆ ಕೆಲವರ ನಿರಂತರ ಕಿರುಕುಳದಿಂದ ಜೀವನವೇ ದುಸ್ತರವಾಗಿ ದಿಕ್ಕು ತೋಚದೆ ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಅವರು ವಿಡಿಯೋದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಧರ್ಮಗೌಡ ಎಂಬುವರಿಂದ ಶೇ.3.5ರ ಬಡ್ಡಿದರದಲ್ಲಿ ಹಣ ಪಡೆದು, ಸುಮಾರು 60 ಲಕ್ಷ ರೂಪಾಯಿಗಳನ್ನು ಇತರರಿಗೆ ನೀಡಿದ್ದೆ. ಆ ಹಣವನ್ನು ಮಂಜುನಾಥ್ ಪವಾರ್, ಕೃಷ್ಣಸಾ ಪವಾರ್, ಛಾಯಾ ಕುಲಕರ್ಣಿ ಮತ್ತು ಜಯರಾಮ್ ಸೇರಿದಂತೆ ಕೆಲವರಿಗೆ ನೀಡಲಾಗಿತ್ತು. ಆದರೆ, ಅವರು ಹಣ ಹಿಂದಿರುಗಿಸದ ಕಾರಣ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು. ಇತ್ತ ಸಾಲ ನೀಡಿದವರಿಂದ ನಿರಂತರ ಕಿರುಕುಳ ಎದುರಿಸಬೇಕಾಯಿತು.” ಎಂದು ಬರೆದಿದ್ದಾರೆ.
ಅಲ್ಲದೆ, “ನನ್ನ ಮೊಬೈಲ್‌ನಲ್ಲಿರುವ ಆಡಿಯೋ ದಾಖಲೆಗಳು ಹಾಗೂ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯಾಂಶ ಹೊರಬರುತ್ತದೆ” ಎಂದು ತನಿಖಾಧಿಕಾರಿಗಳಿಗೆ ಡೆತ್‌ನೋಟ್‌ನಲ್ಲಿ ಸಂಪತ್ ಮನವಿ ಮಾಡಿದ್ದಾರೆ.
ಬೆಟಗೇರಿ ಠಾಣೆ ಪೊಲೀಸರು ಸಂಪತ್ ಅವರ ಮೊಬೈಲ್‌ನ ಸೆಲ್ಫಿ ವಿಡಿಯೋ, ಆಡಿಯೋ ಹಾಗೂ ಡೆತ್‌ನೋಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಮಗ್ರ ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಪತ್ ಅವರ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗದಗ ನಗರದಲ್ಲಿ ಬಡ್ಡಿ ಮಾಫಿಯಾ ಮತ್ತು ಲೇವಾದೇವಿ ದಂಧೆಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.