Skip to main content

Police Roundup

ಪಶ್ಚಿಮ ಘಟ್ಟಕ್ಕೆ ‘ವೈರಲ್’ ಪ್ರವಾಸೋದ್ಯಮದ ಕಂಟಕ: ‘ಕಬ್ಬಿನಾಲೆ’ ಮಾದರಿ ಪರಿಸರ ಮಾಲಿನ್ಯಕ್ಕೆ ವ್ಯಾಪಕ ಆಕ್ರೋಶ

Share News

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಸೌಂದರ್ಯದ ಗನಿಯಂತಿರುವ ‘ಕಬ್ಬಿನಾಲೆ’ಯಂತಹ ಕಡೆಗಳಲ್ಲಿ ಪ್ರವಾಸಿಗರ ಜವಾಬ್ದಾರಿ ರಹಿತ ನಡೆ ಹಾಗೂ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳ ಎಸೆತದಿಂದಾಗಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ. ಕೇವಲ ಕಬ್ಬಿನಾಲೆ ಮಾತ್ರವಲ್ಲದೆ, ಇಡೀ ಮಲೆನಾಡಿನ ಗ್ರಾಮಗಳು ಇಂದು ಅತಿಯಾದ ಪ್ರವಾಸೋದ್ಯಮ ಹಾಗೂ ‘ವೈರಲ್ ಸಂಸ್ಕೃತಿ’ಯಿಂದ ತೀವ್ರ ಸಂಕಷ್ಟ ಎದುರಿಸುತ್ತಿವೆ ಎಂದು ಪರಿಸರ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

​ಸೋಷಿಯಲ್ ಮೀಡಿಯಾಗಾಗಿ ಕಂಟೆಂಟ್ ಕ್ರಿಯೇಟರ್‌ಗಳು, ವ್ಲಾಗರ್‌ಗಳು (Vloggers), ಮಳೆ ನಡಿಗೆ (Rain Walkers), ಟ್ರೆಕ್ಕಿಂಗ್‌ ತಂಡಗಳು, ಡ್ರೋನ್ ಕ್ಯಾಮೆರಾ ಬಳಕೆದಾರರು ಹಾಗೂ ಮದ್ಯಪಾನ ಪ್ರಿಯರು ಮನಸೋಇಚ್ಛೆ ಪ್ರಕೃತಿಯ ಒಡಲನ್ನು ಹಾಳು ಮಾಡುತ್ತಿದ್ದಾರೆ. ‘ಹರ್ಪಿಂಗ್’ (Herping) ಮತ್ತು ‘ಮ್ಯಾಕ್ರೋ ಫೋಟೋಗ್ರಫಿ’ ನೆಪದಲ್ಲಿ ಕಾಡಿನ ಜೀವವೈವಿಧ್ಯಕ್ಕೆ ಧಕ್ಕೆ ತರಲಾಗುತ್ತಿದ್ದು, ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಕಲುಷಿತಗೊಳಿಸಲಾಗುತ್ತಿದೆ.

​ಆಗಸ್ಟ್ 1 ರಂದು ಬೆಂಗಳೂರಿನಂತಹ ನಗರಗಳಿಂದ ‘ಮಳೆ ನಡಿಗೆ’ (Rain Walk) ಕಾರ್ಯಕ್ರಮದ ಹೆಸರಿನಲ್ಲಿ ತಲಾ ₹4,100 ರಷ್ಟು ಭಾರಿ ಶುಲ್ಕ ವಸೂಲಿ ಮಾಡಿ, ಖಾಸಗಿ ಸಂಸ್ಥೆಗಳು ಲಾಭ ಗಳಿಸಲು ಕಾಡಂಚಿನ ಗ್ರಾಮಗಳನ್ನು ಬಳಸಿಕೊಳ್ಳುತ್ತಿರುವುದು ವರದಿಯಾಗಿದೆ. ನಗರವಾಸಿಗಳ ಮನರಂಜನೆ ಹಾಗೂ ವಾಣಿಜ್ಯ ಸಂಸ್ಥೆಗಳ ಲಾಭಕೋರತನಕ್ಕೆ ಪಶ್ಚಿಮ ಘಟ್ಟದ ಶಾಂತಿ ಮತ್ತು ನೈಸರ್ಗಿಕ ಸೌಂದರ್ಯ ಬಲಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

​ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಪ್ರವಾಸೋದ್ಯಮ, ಅಭಿವೃದ್ಧಿ ಹೆಸರಿನ ಯೋಜನೆಗಳು ಮತ್ತು ಸೋಷಿಯಲ್ ಮೀಡಿಯಾ ಕ್ರೇಜ್ ಬ್ರೇಕ್ ಹಾಕದಿದ್ದರೆ ಅಳಿದುಳಿದ ಶೋಲಾ ಕಾಡುಗಳು ಸಂಪೂರ್ಣ ನಾಶವಾಗಲಿವೆ. ಪ್ರಕೃತಿಯನ್ನು ರಕ್ಷಿಸುವ ನಿಜವಾದ ಮಾರ್ಗವೆಂದರೆ, ಈ ಸೂಕ್ಷ್ಮ ವಲಯಗಳಿಗೆ ಬಾರದೆ ಇರುವುದು ಮತ್ತು ಕಾಡಿನ ಮೂಲ ಸ್ವರೂಪಕ್ಕೆ ಧಕ್ಕೆ ತರದೆ ಇರುವುದು.

 

ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಕಾಡಂಚಿನ ಗ್ರಾಮಗಳಲ್ಲಿ ಅಕ್ರಮ ಟ್ರೆಕ್ಕಿಂಗ್, ವಾಣಿಜ್ಯ ಆಧಾರಿತ ಮಳೆ ನಡಿಗೆ ಹಾಗೂ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin