ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಯಲ್ಲಿ ನಡೆದಿದ್ದ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಚಿವರ ತಾಯಿಯ ರಕ್ತಸಂಬಂಧಿಯೇ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದು, ಈತನೂ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಚಿವರ ತಾಯಿಯ ಹತ್ತಿರದ ಸಂಬಂಧಿ ಸೈಯದ್ ಅಮೀರ್ ಹಾಗೂ ಆತನ ಸಹಚರ ಅಮಿರ್ ಅಹ್ಮದ್ ಬಂಧಿತ ಆರೋಪಿಗಳು. ಸೈಯದ್ ಅಮೀರ್ ಮನೆಯವನಂತೆ ನಟಿಸಿ ನಂಬಿಕೆ ದ್ರೋಹ ಎಸಗಿದ್ದರೆ, ಅಮಿರ್ ಅಹ್ಮದ್ ಕಳ್ಳತನಕ್ಕೆ ಸಾಥ್ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಬ್ಬರು ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರು. ಆದರೆ ಕೋವಿಡ್ ಲಾಕ್ಡೌನ್ ಸಮಯದಲ್ಲಿ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾಗಿತ್ತು. ಈ ಸಾಲವನ್ನು ತೀರಿಸಲು ಮತ್ತು ರಿಯಲ್ ಎಸ್ಟೇಟ್ ಮೂಲಕ ಶ್ರೀಮಂತರಾಗುವ ದುರಾಸೆಯಿಂದ ಸೈಯದ್ ಅಮೀರ್ ಸಚಿವರ ಮನೆಯನ್ನೇ ಟಾರ್ಗೆಟ್ ಮಾಡಿದ್ದ ಎನ್ನಲಾಗಿದೆ.
ಸೈಯದ್ ಅಮೀರ್ಗೆ ಸಚಿವರ ಮನೆಗೆ ಮುಕ್ತ ಪ್ರವೇಶವಿತ್ತು. ಇದನ್ನು ದುರುಪಯೋಗಪಡಿಸಿಕೊಂಡ ಈತ, 2023ರಿಂದಲೇ ಹಂತ ಹಂತವಾಗಿ ಯಾರಿಗೂ ಅನುಮಾನ ಬಾರದಂತೆ ಸ್ವಲ್ಪ ಸ್ವಲ್ಪವೇ ಚಿನ್ನಾಭರಣಗಳನ್ನು ಕದಿಯುತ್ತಿದ್ದ. ಒಟ್ಟು 1.2 ಕೆಜಿ ಚಿನ್ನವನ್ನು ಈತ ಲಪಟಾಯಿಸಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವುದು ತಿಳಿಯುತ್ತಿದ್ದಂತೆಯೇ ಸೈಯದ್ ಅಮೀರ್ ಮನೆಗೆ ಬರುವುದನ್ನು ನಿಲ್ಲಿಸಿದ್ದ. ಕುಟುಂಬದವರು ಕರೆ ಮಾಡಿದರೆ ಸ್ವೀಕರಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ವರ್ತನೆಯಿಂದ ಅನುಮಾನಗೊಂಡ ಸಚಿವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತಾಂತ್ರಿಕ ತನಿಖೆ ನಡೆಸಿದ ಶಿವಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, 759 ಗ್ರಾಂ ಚಿನ್ನಾಭರಣಗಳನ್ನು ರಿಕವರಿ ಮಾಡಿದ್ದಾರೆ.
ನಂಬಿದವರಿಂದಲೇ ಇಂತಹ ಕೃತ್ಯ ನಡೆದಿರುವುದು ಸಚಿವರ ಕುಟುಂಬಕ್ಕೆ ಮತ್ತು ಆಪ್ತ ವಲಯಕ್ಕೆ ಭಾರಿ ಆಘಾತ ಮೂಡಿಸಿದೆ.