ಬೆಂಗಳೂರು: ಮನೆಯಲ್ಲಿ ಎಲೆಕ್ಟ್ರಿಕ್ ಬೈಕ್ ಚಾರ್ಜ್ಗೆ ಹಾಕಿದ್ದ ವೇಳೆ ಆಕಸ್ಮಿಕವಾಗಿ ಬ್ಯಾಟರಿ ಸ್ಫೋಟಗೊಂಡು (Battery Blast), ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್ನಲ್ಲಿ ನಡೆದಿದೆ.
ಮರ್ಸಿ ಟೌನ್ ನಿವಾಸಿ, ಆಟೋ ಚಾಲಕ ಲೂಥ್ ನಾಥನ್ (62) ಮೃತಪಟ್ಟ ದುರ್ದೈವಿ. ಲೂಥ್ ನಾಥನ್ ಅವರು ಎಂದಿನಂತೆ ತಮ್ಮ ಎಲೆಕ್ಟ್ರಿಕ್ ಬೈಕನ್ನು ಮನೆಯ ಗ್ರೌಂಡ್ ಫ್ಲೋರ್ನಲ್ಲಿ ಚಾರ್ಜ್ಗೆ ಹಾಕಿ ಅದರ ಪಕ್ಕದಲ್ಲೇ ಮಲಗಿದ್ದರು. ಮುಂಜಾನೆ ಸುಮಾರು 3:15ರ ಸುಮಾರಿಗೆ ಬ್ಯಾಟರಿ ಭೀಕರವಾಗಿ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಮನೆಯ ಹಾಲ್ನಲ್ಲಿ ಬೆಂಕಿ ಆವರಿಸಿಕೊಂಡಿದ್ದು, ನಿದ್ರೆಯಲ್ಲಿದ್ದ ಲೂಥ್ ನಾಥನ್ ಅವರು ಹೊರಬರಲಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ವೇಳೆ ಮೊದಲ ಮಹಡಿಯಲ್ಲಿ ಅವರ ಮಕ್ಕಳು ವಾಸವಾಗಿದ್ದರು, ಅವರು ಅಪಾಯದಿಂದ ಪಾರಾಗಿದ್ದಾರೆ.
ಬ್ಯಾಟರಿ ಸ್ಫೋಟದ ನಂತರ ಇಡೀ ಮನೆಗೆ ಬೆಂಕಿ ವ್ಯಾಪಿಸಿದ್ದು, ಮನೆಯಲ್ಲಿದ್ದ ಪೀಠೋಪಕರಣ ಹಾಗೂ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಟ್ಟ ಸ್ಥಿತಿಯಲ್ಲಿ ಲೂಥ್ ನಾಥನ್ ಅವರ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಮಾಹಿತಿ ಪಡೆದ ಹಲಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆದಾರರಲ್ಲಿ ಈ ಘಟನೆ ತೀವ್ರ ಆತಂಕ ಮೂಡಿಸಿದೆ.