Skip to main content

Police Roundup

ಚಿರತೆ ದಾಳಿ ಕಥೆ ಕಟ್ಟಿ ಕೊಲೆ ಮುಚ್ಚಿಡಲು ಯತ್ನ: ಚಿನ್ನಕ್ಕಾಗಿ ವೃದ್ಧೆಯನ್ನು ಪಾಳು ಕೊಳವೆಬಾವಿಗೆ ತಳ್ಳಿ ಕೊಂದ ಪಾಪಿ ಅಂದರ್!

Share News

ಮೈಸೂರು: ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಪಾಳು ಬಿದ್ದ ಕೊಳವೆಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೇವಲ ಚಿನ್ನಾಭರಣದ ಆಸೆಗಾಗಿ ವೃದ್ಧೆಯನ್ನು ಕೊಲೆ ಮಾಡಿ, ಪ್ರಕರಣವನ್ನು ಮುಚ್ಚಿಹಾಕಲು ಚಿರತೆಯ ಕಥೆ ಸೃಷ್ಟಿಸಿದ್ದ ಘೋರ ರಹಸ್ಯವನ್ನೀಗ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದಾರೆ. ಕೃತ್ಯ ಎಸಗಿದ ಮುಖ್ಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

 

ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ಶಿವರುದ್ರಮ್ಮ (63) ಕೊಲೆಯಾದ ದುರ್ದೈವಿ. ಇವರು ಪ್ರತೀ ಸೋಮವಾರದ ಪೂಜೆಗಾಗಿ ಬಿಲ್ವಪತ್ರೆ ತರಲು ಜಮೀನಿನ ಕಡೆಗೆ ಹೋಗುತ್ತಿದ್ದರು. ಇವರ ಮೈಮೇಲಿದ್ದ ಸುಮಾರು 60 ರಿಂದ 70 ಗ್ರಾಂ ಚಿನ್ನಾಭರಣದ ಮೇಲೆ ಪಕ್ಕದ ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಹದೇವಪ್ಪ ಎಂಬಾತನ ಕಣ್ಣು ಬಿದ್ದಿದೆ.

 

​ವಾಡಿಕೆಯಂತೆ ಶಿವರುದ್ರಮ್ಮ ಅವರು ಬಿಲ್ವಪತ್ರೆ ಕೀಳಲು ಬಂದಾಗ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾದ ಮಹದೇವಪ್ಪ, ಅವರ ಗಮನ ಸರಿಸಿ ಪಕ್ಕದಲ್ಲೇ ಇದ್ದ ಪಾಳು ಬಿದ್ದ ಕೊಳವೆಬಾವಿಯ ಗುಂಡಿಗೆ ತಳ್ಳಿದ್ದಾನೆ. ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದ ವೃದ್ಧೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಲಪಟಾಯಿಸಿದ ಕಾಮುಕ, ಬಳಿಕ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಕೊಳವೆಬಾವಿಗೆ ಕಲ್ಲು-ಮಣ್ಣು ಸುರಿದು ಜಲಸಮಾಧಿ ಮಾಡಿದ್ದಾನೆ.

 

ಶಿವರುದ್ರಮ್ಮ ಅವರು ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರಿಗೆ ವೃದ್ಧೆ ನಾಪತ್ತೆಯಾದ ಸ್ಥಳದಲ್ಲಿ ಅವರ ಚಪ್ಪಲಿಗಳು ಹಾಗೂ ಚಿರತೆಯ ಹೆಜ್ಜೆಗುರುತುಗಳು ಪತ್ತೆಯಾಗಿದ್ದವು. ವೃದ್ಧೆಯನ್ನು ಚಿರತೆ ಹೊತ್ತೊಯ್ದಿದೆ ಎಂಬಂತೆ ಬಿಂಬಿಸಲು ಆರೋಪಿ ನಕಲಿ ಹೆಜ್ಜೆಗುರುತುಗಳನ್ನು ಸೃಷ್ಟಿಸಿ ಪೊಲೀಸರ ಹಾದಿ ತಪ್ಪಿಸಲು ಹರಸಾಹಸ ಪಟ್ಟಿದ್ದ.

 

ಆದರೆ, ಈ ಹೆಜ್ಜೆಗುರುತುಗಳ ಬಗ್ಗೆ ಅನುಮಾನಗೊಂಡ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದಾಗ ಕಸುವಿನಹಳ್ಳಿಯ ಜಮೀನಿನ ಪಾಳು ಕೊಳವೆಬಾವಿಯ ಒಳಗೆ ಕಲ್ಲು-ಮಣ್ಣು ಮುಚ್ಚಿರುವುದು ಕಂಡುಬಂದಿದೆ. ಅದನ್ನು ತೆಗೆದು ಪರಿಶೀಲಿಸಿದಾಗ ಶಿವರುದ್ರಮ್ಮ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜಮೀನಿನ ಉಸ್ತುವಾರಿ ಮಹದೇವಪ್ಪನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಚಿನ್ನದ ಆಸೆಗಾಗಿ ನಡೆಸಿದ ಈ ಭೀಕರ ಕೊಲೆಯ ರಹಸ್ಯ ಸಂಪೂರ್ಣವಾಗಿ ಬಯಲಾಗಿದೆ.

 

​ಪ್ರಕರಣದ ಮುಖ್ಯ ಆರೋಪಿ ಮಹದೇವಪ್ಪ ಸದ್ಯ ಪೊಲೀಸರ ಅತಿಥಿಯಾಗಿದ್ದು, ಈ ಹಿಂಸಾತ್ಮಕ ಕೃತ್ಯಕ್ಕೆ ಹಾಗೂ ಸಾಕ್ಷ್ಯ ನಾಶಪಡಿಸಲು ಇನ್ನಿಬ್ಬರು ಸಹಕರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿರುವ ನಂಜನಗೂಡು ಗ್ರಾಮಾಂತರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin