Skip to main content

Police Roundup

ತಿರುಪತಿ ಲಡ್ಡುಗೆ ಪಾಮ್ ಆಯಿಲ್ ಬಳಕೆ ಪ್ರಕರಣ: ಪ್ರಮುಖ ಆರೋಪಿ ಕೈಲಾಸ್‌ ಚಂದ್‌ ಬಂಧಿಸಿದ ಇಡಿ!

Share News

ಹೈದರಾಬಾದ್‌: ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಕ್ಕೆ (TTD) ಕಲಬೆರಕೆ ತುಪ್ಪ ಪೂರೈಕೆ ಮಾಡಿರುವ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಪ್ರಮುಖ ಕಂಪನಿ ಪ್ರಮೋಟರ್‌ ಒಬ್ಬನನ್ನು ಬಂಧಿಸಿದೆ.

 

​ಎಂ/ಎಸ್‌ ಸುಕೃತಿ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಪ್ರಮೋಟರ್‌ ಕೈಲಾಶ್‌ ಚಂದ್‌ ಮಂಗಲಾ ಬಂಧಿತ ಆರೋಪಿ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್‌ 19ರ ಅಡಿಯಲ್ಲಿ ಈತನನ್ನು ಬಂಧಿಸಲಾಗಿದ್ದು, ವಿಶಾಖಪಟ್ಟಣದಲ್ಲಿರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 

​₹230 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆ:

ಇಡಿ ತನಿಖೆಯ ವಿವರಗಳ ಪ್ರಕಾರ, 2019ರಿಂದ 2024ರ ಅವಧಿಯಲ್ಲಿ ಒಟ್ಟು ₹230 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನು ಟಿಟಿಡಿಗೆ ಪೂರೈಸಲಾಗಿದೆ. ಇದರಲ್ಲಿ ಸುಮಾರು ₹96 ಕೋಟಿ ಮೌಲ್ಯದ ನಕಲಿ ತುಪ್ಪವನ್ನು ಕೈಲಾಶ್‌ ಚಂದ್‌ ಮಂಗಲಾ ಖುದ್ದು ತನ್ನ ಕಾರ್ಖಾನೆಯಲ್ಲಿ ಉತ್ಪಾದಿಸಿದ್ದ ಎಂದು ತಿಳಿದುಬಂದಿದೆ.

 

​ಹೇಗೆ ತಯಾರಾಗುತ್ತಿತ್ತು ಕಲಬೆರಕೆ ತುಪ್ಪ?:

ರಿಫೈನ್ಡ್‌ ಪಾಮ್‌ ಆಯಿಲ್‌, ಪಾಮ್‌ ಕರ್ನಲ್‌ ಆಯಿಲ್‌, ಪಾಮೋಲಿನ್‌ ಹಾಗೂ ಎಂಜಿ-90, ಮೊನೊಗ್ಲಿಸರೈಡ್‌ಗಳು, ಮಿವಾಸೆಟ್‌ 400 ಮತ್ತು ಅಸಿಟಿಕ್‌ ಆಸಿಡ್‌ ಎಸ್ಟರ್‌ಗಳಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು. ನಂತರ ಈ ಉತ್ಪನ್ನಕ್ಕೆ ‘ಅಗ್‌ಮಾರ್ಕ್‌ ಸ್ಪೆಷಲ್‌ ತುಪ್ಪ’ ಎಂದು ಸುಳ್ಳು ಲೇಬಲ್ ಹಚ್ಚಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗುತ್ತಿತ್ತು.

 

​ತಿರುಪತಿ ಪೂರ್ವ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧರಿಸಿ ಇಡಿ ತನಿಖೆ ಕೈಗೆತ್ತಿಕೊಂಡಿತ್ತು. ಟಿಟಿಡಿಗೆ ಕಲಬೆರಕೆ ತುಪ್ಪ ಪೂರೈಸಲು ಕ್ರಿಮಿನಲ್‌ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಭ್ರಷ್ಟಾಚಾರ ನಡೆಸಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin