ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ಹಾಗೂ ಬಹುಮುಖ ಪ್ರತಿಭೆ, ನಟಿ-ಗಾಯಕಿ ಚೈತ್ರಾ ಜೆ. ಆಚಾರ್ ಅವರ ಇನ್ಸ್ಟಾಗ್ರಾಮ್ ಫೋಟೋಗೆ ಅಸಭ್ಯವಾಗಿ ಸಂದೇಶ (ಮೆಸೇಜ್) ಕಳುಹಿಸಿ ವಿಕೃತಿ ಮೆರೆದಿದ್ದ ವ್ಯಕ್ತಿಯೊಬ್ಬನಿಗೆ ನಟಿ ಸರಿಯಾದ ಪಾಠ ಕಲಿಸಿದ್ದಾರೆ. ನಟಿ ನೇರವಾಗಿ ಬೆಂಗಳೂರು ಸಿಟಿ ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡುತ್ತಿದ್ದಂತೆ ಬೆದರಿದ ಆಸಾಮಿ, ತಕ್ಷಣವೇ ಕ್ಷಮೆಯಾಚಿಸಿ ತನ್ನ ಸೋಷಿಯಲ್ ಮೀಡಿಯಾ ಖಾತೆಯನ್ನೇ ಹೈಡ್ ಮಾಡಿಕೊಂಡಿದ್ದಾನೆ.
ಸ್ಯಾಂಡಲ್ವುಡ್ನ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ 31 ವರ್ಷದ ಚೈತ್ರಾ ಆಚಾರ್ ಅವರು, ತಮ್ಮ ಪಾತ್ರ ಹಾಗೂ ಫೋಟೋಶೂಟ್ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಶೇರ್ ಮಾಡಿದ್ದ ಕೊಂಚ ಬೋಲ್ಡ್ ಲುಕ್ನ ಫೋಟೋಗಳಿಗೆ ಕೆಲ ಪುಂಡರು ಅಸಭ್ಯವಾಗಿ ಕಾಮೆಂಟ್ ಮಾಡಿ ವಿಕೃತಿ ಮೆರೆಯುತ್ತಿದ್ದರು. ಇದರಿಂದ ಬೇಸತ್ತ ನಟಿ, ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಕಾಮೆಂಟ್ ಬಾಕ್ಸ್ ಅನ್ನು ರಿಸ್ಟ್ರಿಕ್ಟ್ (Restrict) ಮಾಡಿದ್ದರು.
ಆದರೆ, ಕಾಮೆಂಟ್ ಮಾಡಲು ಅವಕಾಶ ಸಿಗದಿದ್ದಾಗ ಕಿಡಿಗೇಡಿಗಳು ನೇರವಾಗಿ ನಟಿಯ ಇನ್ಬಾಕ್ಸ್ಗೆ (Direct Message) ಅಸಭ್ಯ ಹಾಗೂ ಕೆಟ್ಟ ಪದಬಳಕೆಯ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದರು.
ಇತ್ತೀಚೆಗೆ ವ್ಯಕ್ತಿಯೊಬ್ಬ ನಟಿಯ ಇನ್ಬಾಕ್ಸ್ಗೆ ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ಸಂದೇಶ ಕಳುಹಿಸಿದ್ದನು. ಆತನ ಪ್ರೊಫೈಲ್ ಗಮನಿಸಿದಾಗ ಆತ ಪೊಲೀಸ್ ಇಲಾಖೆಯಲ್ಲೇ ಉದ್ಯೋಗಿಯಾಗಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಚೈತ್ರಾ ಆಚಾರ್, ಸುಮ್ಮನೆ ಕೂರದೆ ಆತನ ಅಸಭ್ಯ ಸಂದೇಶದ ಸ್ಕ್ರೀನ್ಶಾಟ್ ಸಮೇತ ಬೆಂಗಳೂರು ಸಿಟಿ ಪೊಲೀಸ್ (Bangalore City Police) ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ನಟಿ ಚೈತ್ರಾ ಆಚಾರ್ ಅವರು ಸೋಷಿಯಲ್ ಮೀಡಿಯಾದಲ್ಲೇ ಬಹಿರಂಗವಾಗಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆತಂಕಗೊಂಡ ಆ ಕಿಡಿಗೇಡಿ, ತಕ್ಷಣವೇ ನಟಿಗೆ ಮತ್ತೊಂದು ಸಂದೇಶ ಕಳುಹಿಸಿ “ತನ್ನ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ” ಎಂದು ಬೇಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಪೊಲೀಸರಿಂದ ಕಾನೂನು ಕ್ರಮ ಎದುರಿಸುವ ಭೀತಿಯಲ್ಲಿ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ಮತ್ತು ಪೋಸ್ಟ್ಗಳನ್ನು ಸಂಪೂರ್ಣವಾಗಿ ಹೈಡ್ (ಮರೆಮಾಚು) ಮಾಡಿಕೊಂಡು ಸೋಷಿಯಲ್ ಮೀಡಿಯಾದಿಂದ ಎಸ್ಕೇಪ್ ಆಗಿದ್ದಾನೆ.
ಸದ್ಯ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಸೆಲೆಬ್ರಿಟಿಗಳು ಹಾಗೂ ಮಹಿಳೆಯರ ವಿರುದ್ಧ ಆನ್ಲೈನ್ನಲ್ಲಿ ಇಂತಹ ವಿಕೃತಿ ಮೆರೆಯುವವರಿಗೆ ಚೈತ್ರಾ ಆಚಾರ್ ಅವರು ತಕ್ಕ ಪಾಠ ಕಲಿಸಿದ್ದಾರೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.