ಆನೇಕಲ್: ತಾಲ್ಲೂಕಿನ ದೊಮ್ಮಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಬೃಹತ್ ಓವರ್ ಹೆಡ್ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಭೀತಿ ಎದುರಾಗಿದೆ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಟ್ಯಾಂಕ್ ಅನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.
ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು, ಸಾರ್ವಜನಿಕರು ಹಾಗೂ ಸಿಬ್ಬಂದಿ ಭೇಟಿ ನೀಡುತ್ತಾರೆ. ಆಸ್ಪತ್ರೆಯ ಆವರಣದಲ್ಲೇ ಇರುವ ಈ ಶಿಥಿಲಗೊಂಡ ನೀರಿನ ಟ್ಯಾಂಕ್ನ ಸಿಮೆಂಟ್ ಗಾರೆಗಳು ಉದುರಿ ಬೀಳುತ್ತಿದ್ದು, ಬೃಹತ್ ಬಿರುಕುಗಳು ಕಾಣಿಸಿಕೊಂಡಿವೆ. ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು, ಶಿಥಿಲಗೊಂಡಿರುವ ಈ ಓವರ್ ಹೆಡ್ ಟ್ಯಾಂಕ್ ಅನ್ನು ತಕ್ಷಣವೇ ತೆರವುಗೊಳಿಸಿ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಿದೆ.