Skip to main content

Police Roundup

ಒಂದೇ ಒಂದು ಬೈಕ್ ಕಳವು ಕೇಸ್ ಬೆನ್ನತ್ತಿದ ಪೊಲೀಸರು; ತನಿಖೆ ವೇಳೆ ಸಿಕ್ಕಿದ್ದು ಬರೋಬ್ಬರಿ 20 ಬೈಕ್‌ಗಳು, ಖದೀಮ ಅರೆಸ್ಟ್!

Share News

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಕುಡಚಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ ಒಂದು ಬೈಕ್ ಕಳವು ಪ್ರಕರಣದ ಸುಳಿವು ಬೆನ್ನತ್ತಿ ಹೋಗಿ ಬರೋಬ್ಬರಿ 20 ಕದ್ದ ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಜಿಲ್ಲಾ ಬೈಕ್ ಕಳ್ಳನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

​ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ನಿವಾಸಿ ಮಲಗೌಡ ಅಣ್ಣಾಸಾಹೇಬ್ ಪಾಟೀಲ್ (38) ಬಂಧಿತ ಆರೋಪಿಯಾಗಿದ್ದಾನೆ.

 

ಕೆಲ ದಿನಗಳ ಹಿಂದೆ ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಜಾತ್ರೆಗೆ ಬಂದಿದ್ದ ಪುಷ್ಪಾ ಮಹಾದೇವ್ ನಂದಕೂರ ಎಂಬುವವರ ಬೈಕ್ ಕಳವಾಗಿತ್ತು. ಈ ಕುರಿತು ಅವರು ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳ್ಳನ ಪತ್ತೆಗಾಗಿ ತನಿಖೆ ಆರಂಭಿಸಿದ್ದರು.

 

ಕುಡಚಿ ಪೊಲೀಸರು ತನಿಖೆ ಚುರುಕುಗೊಳಿಸಿ ಚಿಂಚಲಿ ಪಟ್ಟಣದ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ, ಬೈಕ್‌ನಲ್ಲಿ ಬರುತ್ತಿದ್ದ ಮಲಗೌಡನನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರ ಪ್ರಶ್ನೆಗಳಿಗೆ ಆತ ತಡಬಡಾಯಿಸಿ, ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ಪಡೆದು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಆತ ಅಸಲಿ ಕದೀಮ ಎಂಬುದು ಬಯಲಾಗಿದೆ. ಸುಟ್ಟಟ್ಟಿ ಜಾತ್ರೆಯಲ್ಲಿ ಬೈಕ್ ಕದ್ದಿರುವುದಲ್ಲದೆ, ತಾನು ಬೇರೆ ಬೇರೆ ಕಡೆಗಳಲ್ಲಿ ಹಲವು ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

 

ಬಂಧಿತ ಆರೋಪಿ ನೀಡಿದ ಮಹತ್ವದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಆತ ವಿವಿಧೆಡೆ ಕದ್ದು ಬಚ್ಚಿಟ್ಟಿದ್ದ ಒಟ್ಟು 20 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಈ ಎಲ್ಲಾ ದ್ವಿಚಕ್ರ ವಾಹನಗಳ ಒಟ್ಟು ಮೌಲ್ಯ ಸುಮಾರು ₹5.75 ಲಕ್ಷ ಎಂದು ಅಂದಾಜಿಸಲಾಗಿದೆ.

 

​ಒಂದು ಸಾಮಾನ್ಯ ಕಳವು ಪ್ರಕರಣದ ಆಳಕ್ಕೆ ಇಳಿದು ಭಾರಿ ಪ್ರಮಾಣದ ವಾಹನಗಳನ್ನು ಪತ್ತೆಹಚ್ಚಿದ ಕುಡಚಿ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಿಂದ ಇನ್ನಷ್ಟು ಕಳವು ಪ್ರಕರಣಗಳು ಹಾಗೂ ಆತನ ಜೊತೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin