ಬೆಳಗಾವಿ: ಮುಸ್ಲಿಂ ಯುವಕನೊಬ್ಬನ ನಿರಂತರ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಹಿಂದೂ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ತಕ್ಷಣವೇ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಿರಾಜ್ ಕಾಳೆ ಎಂದು ಗುರುತಿಸಲಾಗಿದೆ.
ಮನೆ ಕಟ್ಟಡ ಕೆಲಸ ಮಾಡುತ್ತಿದ್ದ ಪಿರಾಜ್ ಕಾಳೆ ಎಂಬ ಯುವಕನಿಗೆ ಪಿಯುಸಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಪರಿಚಯವಾಗಿತ್ತು. ದಿನಗಳೆದಂತೆ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಆದರೆ, ಇವರಿಬ್ಬರ ಪ್ರೀತಿಯ ವಿಷಯ ಬಾಲಕಿಯ ಮನೆಯವರಿಗೆ ತಿಳಿಯುತ್ತಿದ್ದಂತೆ, ಪೋಷಕರು ಎಚ್ಚೆತ್ತುಕೊಂಡು ಯುವತಿಯ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದರು ಎನ್ನಲಾಗಿದೆ.
ಮೊಬೈಲ್ ಕಸಿದುಕೊಂಡ ನಂತರವೂ ಆರೋಪಿ ಪಿರಾಜ್ ಕಾಳೆ ಸುಮ್ಮನಿರದೆ, ಬಾಲಕಿಯ ಮನೆಗೆ ಪದೇ ಪದೇ ಬರುತ್ತಿದ್ದ. ನಿರಂತರವಾಗಿ ಮನೆ ಹತ್ತಿರ ಬಂದು ಕಿರುಕುಳ ನೀಡುತ್ತಿದ್ದಿದ್ದರಿಂದ ತೀವ್ರ ಮನನೊಂದ ಬಾಲಕಿ ಅಂತಿಮವಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ಪೋಷಕರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಪಿಯುಸಿ ಓದುತ್ತಿದ್ದ ಮಗಳು ಸಣ್ಣ ವಯಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರಿಂದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಈ ಆತ್ಮಹತ್ಯೆ ಪ್ರಕರಣದ ಹಿಂದೆ ‘ಲವ್ ಜಿಹಾದ್’ ನಡೆದಿರಬಹುದು ಎಂಬ ತೀವ್ರ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪೊಲೀಸ್ ಇಲಾಖೆ ಮಾಹಿತಿ: ಅಪ್ರಾಪ್ತ ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪಿರಾಜ್ ಕಾಳೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಇದು ಪ್ರೀತಿ-ಪ್ರೇಮದ ವಿಚಾರವೋ ಅಥವಾ ಇದರ ಹಿಂದೆ ಬೇರೆನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಸಂಪೂರ್ಣ ತನಿಖೆಯ ನಂತರವಷ್ಟೇ ನಿಖರ ಮಾಹಿತಿ ಹೊರಬರಬೇಕಿದೆ.