ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸೌಂದರ್ಯವನ್ನು ಕಾಪಾಡುವ ಹಾಗೂ ಸಾರ್ವಜನಿಕ ಸ್ಥಳಗಳ ಅಂದವನ್ನು ಉಳಿಸುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ (BCity) ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್‌ಗಳು ಹಾಗೂ ಫ್ಲೆಕ್ಸ್‌ಗಳ ವಿರುದ್ಧ ಬೃಹತ್ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಪಾಲಿಕೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಾಗೂ ಸರ್ಕಲ್‌ಗಳಲ್ಲಿದ್ದ ನೂರಾರು ಕಾನೂನುಬಾಹಿರ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.
ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಹಾಗೂ ವಾಹನ ಸವಾರರ ಗಮನ ಬೇರೆಡೆ ಸೆಳೆದು ಅಪಘಾತಗಳಿಗೆ ಕಾರಣವಾಗುತ್ತಿದ್ದ ಅನಧಿಕೃತ ರಾಜಕೀಯ, ವಾಣಿಜ್ಯ ಮತ್ತು ವೈಯಕ್ತಿಕ ಫ್ಲೆಕ್ಸ್‌ಗಳನ್ನು ಪಾಲಿಕೆಯ ಸಿಬ್ಬಂದಿಗಳು ಜೆಸಿಬಿ ಹಾಗೂ ಕಟಿಂಗ್ ಯಂತ್ರಗಳ ಸಹಾಯದಿಂದ ಜಪ್ತಿ ಮಾಡಿದರು.
ಸ್ವಚ್ಛ, ಸುಂದರ ಮತ್ತು ಶಿಸ್ತುಬದ್ಧ ಬೆಂಗಳೂರು ನಿರ್ಮಾಣಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಸಂಪೂರ್ಣ ಬದ್ಧವಾಗಿದೆ ಎಂದು ಪಾಲಿಕೆಯ ಪ್ರಮುಖರು ತಿಳಿಸಿದ್ದಾರೆ. ನಗರದ ಫುಟ್‌ಪಾತ್‌ಗಳು, ವಿದ್ಯುತ್ ಕಂಬಗಳು ಹಾಗೂ ಸಾರ್ವಜನಿಕ ಗೋಡೆಗಳ ಮೇಲೆ ಅನುಮತಿ ಇಲ್ಲದೆ ಬ್ಯಾನರ್ ಅಳವಡಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರವೃತ್ತಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ನಗರದ ಯಾವುದೇ ಭಾಗದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ಅಳವಡಿಸಿದರೆ ಕೇವಲ ತೆರವುಗೊಳಿಸುವುದಷ್ಟೇ ಅಲ್ಲದೆ, ಸಂಬಂಧಪಟ್ಟ ಮಾಲೀಕರು ಹಾಗೂ ಮುದ್ರಕರ (Printers) ವಿರುದ್ಧ ಭಾರೀ ಪ್ರಮಾಣದ ದಂಡ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಪಾಲಿಕೆ ಕಡಕ್ ಸಂದೇಶ ರವಾನಿಸಿದೆ. ಪಾಲಿಕೆಯ ಈ ದೃಢ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.