Skip to main content

Police Roundup

ಜ್ಯೋತಿಷ್ಯದ ಹೆಸರಲ್ಲಿ ಲೈಂಗಿಕ ದೌರ್ಜನ್ಯ: ತಲೆಮರೆಸಿಕೊಂಡಿರುವ ‘ನಕಲಿ’ ಜ್ಯೋತಿಷಿಗಾಗಿ ಪೊಲೀಸರ ಹುಡುಕಾಟ

Share News

ಬೆಂಗಳೂರು: ದೋಷ ನಿವಾರಣೆ ಮತ್ತು ಪೂಜೆಯ ನೆಪದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕ ಜ್ಯೋತಿಷಿಯೊಬ್ಬನ ಕೃತ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಆರೋಪಿ ಮೋಹನ್ ಕುಮಾರ್ ಜೆ ಸದ್ಯ ತಲೆಮರೆಸಿಕೊಂಡಿದ್ದಾನೆ.

 

ಸಂತ್ರಸ್ತ ಮಹಿಳೆಯ ಕುಟುಂಬದ ಕಷ್ಟವನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಮೋಹನ್ ಕುಮಾರ್, “ನಿಮ್ಮ ವ್ಯಾಪಾರದಲ್ಲಿ ದೋಷವಿದೆ, ಕುಟುಂಬಕ್ಕೆ ಸಂಚಕಾರವಿದೆ” ಎಂದು ಭಯ ಹುಟ್ಟಿಸಿದ್ದಾನೆ. ಇದನ್ನು ನಂಬಿದ ಮಹಿಳೆಯಿಂದ ಪೂಜೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಪೀಕಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಪೂಜೆ ಮತ್ತು ದೀಕ್ಷೆ ನೀಡುವ ನೆಪದಲ್ಲಿ ಗೃಹಿಣಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ತನ್ನ ಕಾಮದ ಆಟಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ, ಆರೋಪಿಯು ವಾಮಾಚಾರದ ಬೆದರಿಕೆ ಒಡ್ಡಿದ್ದಾನೆ. “ನನ್ನ ಮಾತಿಗೆ ಒಪ್ಪದಿದ್ದರೆ ನಿನ್ನ ಪತಿ ಮತ್ತು ಮಕ್ಕಳ ಮೇಲೆ ವಾಮಾಚಾರ ಮಾಡಿ ಸಾಯಿಸುತ್ತೇನೆ” ಎಂದು ಸಂತ್ರಸ್ತೆಯನ್ನು ಮಾನಸಿಕವಾಗಿ ಕುಗ್ಗಿಸಿದ್ದಾನೆ. ಈ ಕಿರುಕುಳವನ್ನು ತಾಳಲಾರದ ಮಹಿಳೆ ಅಂತಿಮವಾಗಿ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

 

ಮಹಿಳೆಯ ದೂರಿನ ಮೇರೆಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆರೋಪಿ ಮೋಹನ್ ಕುಮಾರ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಈ ‘ನಕಲಿ’ ಸ್ವಾಮಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

 

ಜ್ಯೋತಿಷ್ಯ ಮತ್ತು ದೈವ ಭಕ್ತಿಯ ಸೋಗಿನಲ್ಲಿ ಸಮಾಜದಲ್ಲಿ ಸಂಚರಿಸುವ ಇಂತಹ ಕಾಮುಕರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಕಷ್ಟದ ಸಮಯದಲ್ಲಿ ಯಾರಾದರೂ ಆರ್ಥಿಕವಾಗಿ ಅಥವಾ ದೈಹಿಕವಾಗಿ ಶೋಷಣೆಗೆ ಯತ್ನಿಸಿದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin