ಬೆಂಗಳೂರು: “ಕರ್ನಾಟಕ ಪೊಲೀಸರು ಏನು ಮಾಡುತ್ತಾರೆ ನೋಡೋಣ” ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದ ಅಂತರರಾಷ್ಟ್ರೀಯ ಡ್ರಗ್ ಜಾಲದ ಕಿಂಗ್‌ಪಿನ್ ಸೇರಿದಂತೆ ನಾಲ್ವರು ಅಪಾಯಕಾರಿ ಪೆಡ್ಲರ್‌ಗಳನ್ನು ಹೆಬ್ಬಾಳ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ 17 ಕೆಜಿ 580 ಗ್ರಾಂ ತೂಕದ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಆಧರಿಸಿ ಹೆಬ್ಬಾಳ ಪೊಲೀಸರು ದೇಶದ ವಿವಿಧೆಡೆ ದಾಳಿ ನಡೆಸಿ ಈ ಕೆಳಗಿನ ನಾಲ್ವರನ್ನು ಸದ್ಯ ಜೈಲಿಗಟ್ಟಿದ್ದಾರೆ:
ಸೊಲೊಮನ್ ಟಚುಕ್ಯೂ (ನೈಜೀರಿಯಾ ಮೂಲದ ಪ್ರಮುಖ ಆರೋಪಿ – ದೆಹಲಿಯಲ್ಲಿ ಬಂಧನ)
ರಾಕಾಂಗ್ಮಿ ತನಿರೋಸ್ (ಮಣಿಪುರ ಮೂಲದವಳು)
ಮೋಹನ್ ಕುಮಾರ್
ಜಾನ್ಸನ್
ಈ ಹಿಂದೆ ಇದೇ ಹೆಬ್ಬಾಳ ಪೊಲೀಸರು ಕಾರ್ಯಾಚರಣೆ ನಡೆಸಿ 34 ಕೋಟಿ ರೂಪಾಯಿ ಮೌಲ್ಯದ 17.400 ಗ್ರಾಂ ಡ್ರಗ್ಸ್ ಜಪ್ತಿ ಮಾಡಿ, 8 ಮಂದಿ ಆರೋಪಿಗಳನ್ನು ಜೈಲಿಗಟ್ಟಿದ್ದರು. ಈ ಯಶಸ್ವಿ ಕಾರ್ಯಾಚರಣೆಯ ಬಳಿಕ, ನೈಜೀರಿಯಾದಲ್ಲಿ ಕುಳಿತಿದ್ದ ಪ್ರಮುಖ ಆರೋಪಿಯು ಬೆಂಗಳೂರಿನಲ್ಲಿದ್ದ ತನ್ನ ಸಹಚರನಿಗೆ ಮೆಸೇಜ್ ಕಳುಹಿಸಿದ್ದನು.
”ಬೆಂಗಳೂರಿನಲ್ಲಿ ಈಗ ಪೆಡ್ಲಿಂಗ್ ಮಾಡುವುದು ಕಷ್ಟವಾಗುತ್ತಿದೆ. ಕರ್ನಾಟಕ ಪೊಲೀಸರು ಸೆಕ್ಯೂರಿಟಿ ತುಂಬಾ ಟೈಟ್ ಮಾಡಿದ್ದಾರೆ. ಆದರೂ ಪೊಲೀಸರು ನಮ್ಮನ್ನು ಹೇಗೆ ಹಿಡಿಯುತ್ತಾರೆ ನೋಡೋಣ…” ಎಂದು ಚಾಲೆಂಜ್ ಹಾಕಿದ್ದನು.
ಆರೋಪಿಗಳು ಆಹಾರ ಪದಾರ್ಥಗಳ (Food Items) ಪ್ಯಾಕೆಟ್‌ಗಳ ಒಳಗೆ ಎಂಡಿಎಂಎ ಡ್ರಗ್ಸ್ ಅಡಗಿಸಿಟ್ಟು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಹೆಬ್ಬಾಳ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸರು 5 ವಿಶೇಷ ತಂಡಗಳನ್ನು ರಚಿಸಿ ದೆಹಲಿ ಹಾಗೂ ಬೆಂಗಳೂರಿನ ವಿವಿಧೆಡೆ ಏಕಕಾಲಕ್ಕೆ ಮಿಂಚಿನ ದಾಳಿ ನಡೆಸಿದರು.
ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ನೈಜೀರಿಯಾ ಮೂಲದ ಕಿಂಗ್‌ಪಿನ್ ಸೊಲೊಮನ್ ಹಾಗೂ ಬೆಂಗಳೂರಿನಲ್ಲಿದ್ದ ಮೂವರು ಪೆಡ್ಲರ್‌ಗಳನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ಬೆಂಗಳೂರು ಪೊಲೀಸರು ತಮಗೆ ಚಾಲೆಂಜ್ ಹಾಕಿದ್ದ ಡ್ರಗ್ ಮಾಫಿಯಾ ಬೆನ್ನೆಲುಬನ್ನು ಮುರಿದಿದ್ದಾರೆ.