ಪಾಟ್ನಾ (ಬಿಹಾರ): ಹೆತ್ತ ತಾಯಿ ಒಂದು ಕಡೆ, ನಾಲ್ಕು ವರ್ಷಗಳ ಕಾಲ ತಾಯಿಗಿಂತಲೂ ಹೆಚ್ಚಾಗಿ ಸಾಕಿದ ಅಪಹರಣಗಾರ್ತಿ ಮತ್ತೊಂದು ಕಡೆ! ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿರುವ ಈ ಒಂದು ಹೃದಯವಿದ್ರಾವಕ ಘಟನೆ ಇಡೀ ಸಮಾಜದ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕ ಈಗ ಪತ್ತೆಯಾಗಿದ್ದರೂ, ತನ್ನ ಹೆತ್ತ ತಾಯಿಯನ್ನೇ ಗುರುತಿಸಲಾಗದ ಮಾನಸಿಕ ಸ್ಥಿತಿಯಲ್ಲಿದ್ದಾನೆ.
ಕಳೆದ 2022ರಲ್ಲಿ ಔರಂಗಾಬಾದ್‌ನ ಪ್ರಸಿದ್ಧ ಓಬ್ರಾ ದೇವಿ ದೇವಸ್ಥಾನದಲ್ಲಿ ಭಾರಿ ಜನಸಂದಣಿ ಇತ್ತು. ಈ ವೇಳೆ ಶಿವ ಪಾಂಡೆ ಎಂಬ 4 ವರ್ಷದ ಪುಟ್ಟ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಹೆತ್ತವರು ಅದೆಷ್ಟೇ ಹುಡುಕಾಡಿದರೂ, ಪೋಲೀಸ್ ಠಾಣೆ ಮೆಟ್ಟಿಲೇರಿದರೂ ಮಗನ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ಗಯಾ ಪೊಲೀಸರಿಗೆ ಸಿಕ್ಕ ರಹಸ್ಯ ಮಾಹಿತಿಯ ಮೇರೆಗೆ ಖಿಜರಸರಾಯ್ ಪ್ರದೇಶದಲ್ಲಿ ದಾಳಿ ನಡೆಸಿದಾಗ, ಶಿವ ಪಾಂಡೆ ಪತ್ತೆಯಾಗಿದ್ದಾನೆ. ಆದರೆ ಅಲ್ಲಿ ಎದುರಾದ ಪರಿಸ್ಥಿತಿ ಮಾತ್ರ ಯಾರೂ ಊಹಿಸದಂತಿತ್ತು.
ಪೊಲೀಸರು ಮಗನನ್ನು ಹೆತ್ತ ತಂದೆ-ತಾಯಿಯ ಸಮ್ಮುಖಕ್ಕೆ ಕರೆತಂದಾಗ ಅಲ್ಲಿ ಅಸಲಿ ಕಣ್ಣೀರಿನ ಕಥೆ ಶುರುವಾಯಿತು. 7 ವರ್ಷ ಪ್ರಾಯದ ಆ ಬಾಲಕ ತನ್ನ ಹೆತ್ತತಾಯಿಯನ್ನು ಒಪ್ಪಲು ಸಂಪೂರ್ಣವಾಗಿ ನಿರಾಕರಿಸಿದ. “ಈಕೆ ನನ್ನ ಅಮ್ಮ ಅಲ್ಲ” ಎಂದು ಹಠ ಹಿಡಿದು ರೋಧಿಸಿದ. ಕಳೆದ ನಾಲ್ಕು ವರ್ಷಗಳಿಂದ ತನ್ನನ್ನು ಪ್ರೀತಿಯಿಂದ ಸಾಕಿದ ಅಪಹರಣಗಾರ್ತಿಯೇ ತನ್ನ ನಿಜವಾದ ತಾಯಿ ಎಂದು ಆ ಮಗು ಬಲವಾಗಿ ನಂಬಿದೆ. ಹೆತ್ತವರ ಬಳಿ ಇರಲು ಒಪ್ಪದೆ, ಆಕೆಯ ಬಳಿಗೇ ಹೋಗುತ್ತೇನೆ ಎಂದು ಮಗು ಅಳುತ್ತಿದ್ದರೆ, ಇತ್ತ ಹೆತ್ತ ಕರುಳು ಕಣ್ಣೀರಿನಲ್ಲಿ ಮುಳುಗಿದೆ. ಸದ್ಯ ಪರಿಸ್ಥಿತಿಯನ್ನು ನಿಭಾಯಿಸಲು ಮಗುವಿಗೆ ಪೊಲೀಸರು ಪರಿಣಿತರಿಂದ ಕೌನ್ಸೆಲಿಂಗ್ ಕೊಡಿಸುತ್ತಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಅಪಹರಣಗಾರ್ತಿ ಬಾಯಿಬಿಟ್ಟ ಸತ್ಯ ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮದುವೆಯಾಗಿ ಹಲವು ವರ್ಷಗಳಾದರೂ ಆಕೆಗೆ ಮಕ್ಕಳಾಗಿರಲಿಲ್ಲ. ಇದರಿಂದ ಬೇಸತ್ತ ಆಕೆಯ ಪತಿ ಎರಡನೇ ಮದುವೆಯಾಗಿದ್ದ. ತೀವ್ರ ಮಾನಸಿಕ ವೇದನೆ ಹಾಗೂ ಏಕಾಂಗಿತನದಲ್ಲಿದ್ದ ಈಕೆ, ಮಗುವಿನ ಆಸೆಗಾಗಿ ದೇವಸ್ಥಾನಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅಲೆಯುತ್ತಿದ್ದಳು. 2022ರಲ್ಲಿ ಓಬ್ರಾ ದೇವಿ ದೇವಸ್ಥಾನದಲ್ಲಿ ಶಿವ ಪಾಂಡೆ ಒಂಟಿಯಾಗಿ ಸಿಕ್ಕಾಗ, ಆಕೆಗೆ ಮಮಕಾರ ಉಕ್ಕಿ ಆತನನ್ನು ಅಪಹರಿಸಿದ್ದಳು. ಅಂದಿನಿಂದ ಯಾರಿಗೂ ಅನುಮಾನ ಬಾರದಂತೆ ಸ್ವಂತ ಮಗನಿಗಿಂತಲೂ ಹೆಚ್ಚಾಗಿ ಪ್ರೀತಿ ನೀಡಿ ಆತನನ್ನು ಬೆಳೆಸಿದ್ದಳು.
ಮಗು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸ್ಥಳಾಂತರಗೊಂಡರೂ 4 ವರ್ಷಗಳ ದೀರ್ಘಾವಧಿಯವರೆಗೆ ಯಾರೂ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಪೊಲೀಸರನ್ನೇ ಆಶ್ಚರ್ಯಗೊಳಿಸಿದೆ. ಸದ್ಯ ಬಾಲಕನನ್ನು ಆತನ ನಿಜವಾದ ಕುಟುಂಬಸ್ಥರ ವಶಕ್ಕೆ ಒಪ್ಪಿಸಲಾಗಿದ್ದು, ಕಾನೂನುಬಾಹಿರವಾಗಿ ಮಗುವನ್ನು ಅಪಹರಿಸಿ ತಾವೇ ಇಟ್ಟುಕೊಂಡಿದ್ದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಹೆತ್ತ ಕರುಳಿನ ತವಕ ಒಂದು ಕಡೆಯಾದರೆ, ಅಪಹರಿಸಿದರೂ ತಾಯಿಯಂತೆ ಸಾಕಿದ ಮಹಿಳೆಯ ಮೇಲಿನ ಮಗುವಿನ ನಿಷ್ಕಲ್ಮಷ ಪ್ರೀತಿ ಮತ್ತೊಂದು ಕಡೆ. ಈ ಅಪರೂಪದ ಘಟನೆ ತಾಯಿ ಪ್ರೀತಿ ಮತ್ತು ಕಾನೂನಿನ ಚೌಕಟ್ಟಿನ ನಡುವಿನ ಸೂಕ್ಷ್ಮ ಗೆರೆಯನ್ನು ಜಗತ್ತಿಗೆ ಪರಿಚಯಿಸಿದೆ.