ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣಗಳ ಸರಮಾಲೆ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಶಿಕ್ಷಕರು ಮತ್ತು ಪದವೀಧರರು ರೋಸಿಹೋಗಿದ್ದು, ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾದ ಎ.ಪಿ. ರಂಗನಾಥ್ ಹಾಗೂ ಕೆ.ಎಂ. ಸುರೇಶ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್ ವಿರುದ್ಧ ಸಚಿವರ ವಾಗ್ದಾಳಿ:
ರಾಜ್ಯದಲ್ಲಿ ಕೆಪಿಎಸ್‌ಸಿ ಅಕ್ರಮಗಳು ಸೇರಿದಂತೆ ಸಾಲು ಸಾಲು ಹಗರಣಗಳು ನಡೆಯುತ್ತಿದ್ದು, ಇದರಿಂದ ಯುವಜನತೆ ಮತ್ತು ಪದವೀಧರರು ತೀವ್ರ ನಿರಾಸೆಗೊಂಡಿದ್ದಾರೆ. ಪರಿಷತ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು, ಈ ಬಾರಿ ಪದವೀಧರರು ಹಾಗೂ ಶಿಕ್ಷಕರು ಸರ್ಕಾರಕ್ಕೆ ವಿರುದ್ಧವಾಗಿ ಮತ ಚಲಾಯಿಸಲಿದ್ದಾರೆ ಎಂದರು.
ನೈಸ್ ವಿವಾದ – ‘ಸರ್ಕಾರದ ಪಾಪದ ಕೊಡ ತುಂಬಿದೆ’:
ನೈಸ್ ಯೋಜನೆಯ ವಿಚಾರದಲ್ಲಿ ಹೈಕೋರ್ಟ್ ವ್ಯಕ್ತಪಡಿಸಿರುವ ಕಟು ಅಭಿಪ್ರಾಯಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ (ಸ್ಟೇ) ಪಡೆಯಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. “ನವೆಂಬರ್ 2ಕ್ಕೆ ವಿಚಾರಣೆ ನಿಗದಿಯಾಗಿದ್ದು, ಅಕ್ರಮಗಳನ್ನು ಮುಚ್ಚಿಹಾಕಲು ತಡೆ ಪಡೆಯಲು ಹೋಗಿದ್ದಾರೆ. ರೈತರ ಸುದೀರ್ಘ ಹೋರಾಟಕ್ಕೆ ನ್ಯಾಯಯುತ ಪ್ರತಿಫಲ ಸಿಕ್ಕಿದೆ. ತಮ್ಮ ಮೇಲಿನ ಆರೋಪಗಳಿಂದ ದಾರಿ ತಪ್ಪಿಸಲು ಕಾಂಗ್ರೆಸ್ ನಾಯಕರು ಬಿಜೆಪಿ-ಜೆಡಿಎಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಅವರ ಪಾಪದ ಕೊಡ ಈಗ ತುಂಬಿದೆ,” ಎಂದು ಅವರು ಕಿಡಿಕಾರಿದರು.