ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮಾದರಿಯ ಮನೆ ಕಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿರುವ ಪೊಲೀಸರು, ಬಿಹಾರ ಮೂಲದ ಇಬ್ಬರು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಒಟ್ಟು 7.11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಣ ಹಾಗೂ ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಳೆದ ಜೂನ್ 15 ರಂದು ತಾಲೂಕಿನ ನಿವಾಸಿಯಾದ ಸರಳಾ ಚಂದ್ರಶೇಖರ್ ಎಂಬುವರ ಮನೆಯ ಬೀಗ ಮುರಿದಿದ್ದ ಕಳ್ಳರು, ಒಳಗಿದ್ದ ಚಿನ್ನದ ಮಾಂಗಲ್ಯ ಸರ, ನೆಕ್‌ಲೇಸ್, ನಗದು ಹಣ ಹಾಗೂ ದ್ವಿಚಕ್ರ ವಾಹನವನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿತ್ತು. ಪ್ರಕರಣದ ಗಾಂಭೀರ್ಯತೆಯನ್ನು ಅರಿತ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಚಂದ್ರಕಾಂತ್ ಎಂ.ವಿ. ಅವರ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ (ASP) ಡಾ. ವೆಂಕಟೇಶ್ ಪ್ರಸನ್ನ ಹಾಗೂ ಲಕ್ಷ್ಮೀನಾರಾಯಣ ಎ.ವಿ. ಮತ್ತು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ಪಾಂಡುರಂಗ ಅವರ ನೇರ ಉಸ್ತುವಾರಿಯಲ್ಲಿ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ವಿಶೇಷ ತಂಡವು ತಾಂತ್ರಿಕ ಹಾಗೂ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬೇಟೆಯಾಡಿದೆ. ಬಂಧಿತ ಆರೋಪಿಗಳಿಂದ ಸಾರ್ವಜನಿಕರಿಂದ ಕಳವು ಮಾಡಲಾಗಿದ್ದ ರೂ. 7.11 ಲಕ್ಷ ಮೌಲ್ಯದ ಬಂಗಾರದ ಆಭರಣಗಳು, ನಗದು ಹಾಗೂ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಇಬ್ಬರೂ ಆರೋಪಿಗಳನ್ನು ಪೊಲೀಸರು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಜಾಲದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.